ಕೊಪ್ಪಳ: ಎರಡು ವರ್ಷಗಳ ಹಿಂದೆ ಅಗಲಿದ ತಮ್ಮ ಪತ್ನಿಯ ಮೇಣದ ಮೂರ್ತಿಯೊಂದಿಗೆ ಉದ್ಯಮಿಯೊಬ್ಬರು ಮನೆಯ ಗೃಹ ಪ್ರವೇಶ ನಡೆಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಮನೆ ನಿರ್ಮಾಣದ ಭೂಮಿ ಪೂಜೆಗೆ ಇದ್ದ ಆಕೆ ಮನೆಯ ಗೃಹ ಪ್ರವೇಶಕ್ಕೆ ಜೀವಂತವಾಗಿದ್ದಿಲ್ಲ. ಆದರೆ ಅದೇ ಮನೆಯಲ್ಲಿ ಜೀವಂತ ಪ್ರತಿಮೆಯಾಗಿದ್ದಳು. ಅರೇ ಇದೇನಪ್ಪ ಜೀವಂತ ಪ್ರತಿಮೆ ಅಂತೀರಾ? ಹಾಗಿದ್ರೆ ಈ ಸ್ಟೋರಿ ಓದಿ.

ಕೊಪ್ಪಳದ ಸಮೀಪದ ಭಾಗ್ಯನಗರದಲ್ಲಿನ ಉದ್ಯಮಿ ಶ್ರೀನಿವಾಸ್ ಗುಪ್ತಾರ ನೂತನ ಮನೆಯಲ್ಲಿ ವಿಶೇಷವಾದ ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಪ್ರತಿಮೆ ಬೇರೆಯಾರದ್ದೂ ಅಲ್ಲ. ಸ್ವತಃ ಶ್ರೀನಿವಾಸ ಗುಪ್ತಾ ಅವರ ಪತ್ನಿ ಕೆವಿಎನ್ ಮಾಧವಿ ಅವರದ್ದು.ಕೆವಿಎನ್ ಮಾಧವಿ ಅವರಿಗೆ ತಮ್ಮ ಕನಸಿನ ಮನೆಯೊಂದನ್ನು ಕಟ್ಟಬೇಕೆಂದು ಆಸೆ ಇತ್ತು. ಅದರಂತೆ ಅವರು ಮನೆಯ ಭೂಮಿ ಪೂಜೆ ನೆರವೇರಿಸಿ, ಮನೆ ನಿರ್ಮಾಣ ಸಹ ಆರಂಭ ಮಾಡಿದ್ದರು. ಆದರೆ 2017ರ ಜುಲೈ 5 ರಂದು ತಿರುಪತಿಗೆ ಹೋಗುವ ವೇಳೆಯಲ್ಲಿ ಕೋಲಾರದ ಬಳಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಆ ಬಳಿಕ ಮನೆ ನಿರ್ಮಾಣದ ಕೆಲಸವನ್ನು ಶ್ರೀನಿವಾಸ್ ಗುಪ್ತಾ ಅರ್ಧಕ್ಕೆ ನಿಲ್ಲಿಸಿದ್ದರು. ನಂತರ ಮಕ್ಕಳ ಒತ್ತಾಯದ ಮೆರೆಗೆ ಮನೆ ನಿರ್ಮಾಣದ ಕೆಲಸವನ್ನು ಪುನಃ ಆರಂಭ ಮಾಡಿದರು.

ಈ ವೇಳೆಯಲ್ಲಿ ಮನೆಯ ನಿರ್ಮಾಣದ ಬಳಿಕ ಪತ್ನಿಯ ನೆನಪಿಗೆ ಏನಾದರೂ ಇರಲೇಬೇಕೆಂದು ನಿರ್ಧರಿಸಿದರು. ಮನೆಯ ಆರ್ಕಿಟೆಕ್ಟ್ ರಂಘಣ್ಣನವರ್ ಮೇಣದ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಬೆಂಗಳೂರಿನ ಶ್ರೀಧರಮೂರ್ತಿ ಮೇಣದ ಪ್ರತಿಮೆ ಬದಲಾಗಿ ಸಿಲಿಕಾನ್ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಶ್ರೀಧರಮೂರ್ತಿ ಸಿಲಿಕಾನ್ ಮೆಟಿರಿಯಲ್ ನಲ್ಲಿ ಮಾಧವಿ ಅವರ ಪ್ರತಿಮೆ ಮಾಡಿದರು. ಈ ಹಿನ್ನಲೆಯಲ್ಲಿ ಇದೇ ಅಗಸ್ಟ್ ತಿಂಗಳ 8 ರಂದು ಶ್ರೀನಿವಾಸ್ ಅವರ ನೂತನ ಮನೆಯ ಗೃಹಪ್ರವೇಶವಾಗಿದ್ದ ಆ ಮನೆಯಲ್ಲಿ ತಮ್ಮ ಪತ್ನಿ ಕೆವಿಎನ್ ಮಾಧವಿಯ ಸಿಲಿಕಾನ್ ಪ್ರತಿಮೆಯನ್ನು ಇಟ್ಟಿದ್ದಾರೆ.

ಸಿಲಿಕಾನ್ ಪ್ರತಿಮೆಯನ್ನು ಮಾಡಲು ಶ್ರೀಧರ ಮೂರ್ತಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಮಯ ತೆಗೆದುಕೊಂಡಿದ್ದಾರೆ. ಈ ಸಿಲಿಕಾನ್ ಪ್ರತಿಮೆಗೆ ಜೀವ ಇಲ್ಲ ಎನ್ನುವುದನ್ನು ಒಂದು ಬಿಟ್ಟರೆ ಥೇಟ್ ಮಾಧವಿ ಅವರ ತರಹನೇ ಇದೆ. ಮಾಧವಿ ಅವರ ಸಿಲಿಕಾನ್ ಪ್ರತಿಮೆಯನ್ನು ಮನೆಯ ಹಾಲ್ ನಲ್ಲಿಟ್ಟಿದ್ದು, ಯಾರಾದರೂ ಮನೆಗೆ ಬಂದರೆ ಇವರನ್ನು ಮಾತನಾಡಿಸದೆ ಇರಲಾರರು. ಈ ಪ್ರತಿಮೆಯಲ್ಲಿ ಮಾಧವಿ ಅವರ ಉಡುತ್ತಿದ್ದ ಸೀರೆಯನ್ನೇ ಉಡಿಸಲಾಗಿದ್ದು, ಅವರು ತೊಡುತ್ತಿದ್ದ ಬಂಗಾರದ ಆಭರಣಗಳನ್ನು ಅವರ ಮೈಮೇಲೆ ಹಾಕಲಾಗಿದೆ. ಜೊತೆಗೆ ಅವರಂತೆಯೇ ಹೇರ್ ಸ್ಟೈಲ್ ಸಹ ಮಾಡಲಾಗಿದೆ.

ಮಾಧವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಈ ಪ್ರತಿಮೆ ಬಂದಾಗಿನಿಂದ ತಮ್ಮ ತಾಯಿ ಎಲ್ಲಿಗೂ ಹೋಗಿಲ್ಲ. ನಮ್ಮ ಜೊತೆಗೇನೆ ಇದ್ದಾರೆ ಎನ್ನುವ ಭಾವದಲ್ಲಿ ಇದ್ದಾರೆ.
ಆದರೆ ಶ್ರೀನಿವಾಸ್ ಗುಪ್ತಾ ಅವರ ಪತ್ನಿ ಮಾಧವಿ ಅವರ ಪ್ರತಿಮೆ ಮಾತ್ರ ಯಾರಿಗೂ ಪ್ರತಿಮೆ ತರಹ ಕಾಣಲು ಸಾಧ್ಯವೇ ಇಲ್ಲ. ಒಟ್ಟಿನಲ್ಲಿ ಪತ್ನಿಯ ಕನಸಿನ ಮನೆಯಲ್ಲಿ ತಮ್ಮ ಕನಸಿನ ರಾಣಿಯ ಪ್ರತಿಮೆ ಇಡುವ ಮೂಲಕ ಶ್ರೀನಿವಾಸ್ ಗುಪ್ತಾ ತಮ್ಮ ಪತ್ನಿ ಮೇಲಿನ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ.
