ತಿರುವನಂತಪುರಂ: ಕೇರಳ ಕೋಯಿಕ್ಕೋಡ್ ನಲ್ಲಿ ನಡೆದ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿ ಸಾವಿನ ಸಂಖ್ಯೆ 18 ಕ್ಕೆ ಏರಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.
ಇಬ್ಬರು ಪೈಲಟ್ ಗಳು ಸೇರಿದಂತೆ ಹದಿನೆಂಟು ಮಂದಿ ಪ್ರಾಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದು ದುರದೃಷ್ಟಕರ. 127 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಿಮಾನ ಬೆಂಕಿಗೆ ಆಹುತಿಯಾಗಿದ್ದರೆ ಕಾರ್ಯಾಚರಣೆಗೆ ಹೆಚ್ಚು ಕಷ್ಟಕರವಾಗುತ್ತಿತ್ತು. ಎರಡು ತನಿಖಾ ತಂಡಗಳು ಇಂದು ಕೇರಳಕ್ಕೆ ತೆರಳಿವೆ ಎಂದು ಪುರಿ ತಿಳಿಸಿದರು.
ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಶುಕ್ರವಾರ 190 ಪ್ರಯಾಣಿಕರನ್ನು ಹೊತ್ತ ವಂದೇ ಭಾರತ್ ವಿಮಾನ ಇದಾಗಿತ್ತು. ಅದು ಸಂಜೆ 7:41 ಕ್ಕೆ ಇಳಿಯಿತು. ಪೈಲಟ್ ವಿಮಾನವನ್ನು ಟೇಬಲ್ಟಾಪ್ ವಿಮಾನ ನಿಲ್ದಾಣದ ರನ್ ವೇಯ ಕೊನೆಯಲ್ಲಿ ತರಲು ಪ್ರಯತ್ನಿಸಿರಬೇಕು. ಭಾರೀ ಮಳೆಯಿದ್ದ ಕಾರಣ ಈ ಅನಾಹುತ ಸಂಭವಿಸಿದೆ .35 ಅಡಿ ಆಳದ ಕಣಿವೆಯಲ್ಲಿ ಬಿದ್ದು ಎರಡು ಭಾಗಗಳಾಗಿ ಒಡೆದಿದೆ ಎಂದು ಸಚಿವರು ಹೇಳಿದರು.
ಎಲ್ಲ ಪ್ರಯಾಣಿಕರು ಮತ್ತು ಕುಟುಂಬ ಸದಸ್ಯರಿಗೆ ಮಾನವೀಯ ನೆರವು ನೀಡಲು ದೆಹಲಿಯಿಂದ ಎರಡು ಮತ್ತು ಮುಂಬಯಿಯಿಂದ ಒಂದು ವಿಶೇಷ ಪರಿಹಾರ ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ತಿಳಿಸಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ), ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಮತ್ತು ಫ್ಲೈಟ್ ಸೇಫ್ಟಿ ವಿಭಾಗಗಳು ಘಟನೆಯ ತನಿಖೆಗಾಗಿ ತಲುಪಿವೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ತಿಳಿಸಿದೆ.