

ಕಾಸರಗೋಡು: ಕುವೈತ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾಸರಗೋಡು ಚೆರ್ಕಳ ಕುಂಡಡ್ಕದ ಕೆ . ರಂಜಿತ್ ( 34) ಹಾಗೂ ತ್ರಿಕ್ಕರಿಪುರ ಇಳಂಬಚ್ಚಿಯ ಕುಂಞ ಕೇಳು ( 55) ರವರ ಮೃತದೇಹಗಳನ್ನು ಶುಕ್ರವಾರ ರಾತ್ರಿ ಊರಿಗೆ ತಲಪಿಸಲಾಯಿತು.
ಕೊಚ್ಚಿಯಿಂದ ಅಂಬ್ಯುಲೆನ್ಸ್ ಮೂಲಕ ಮೃತದೇಹಗಳನ್ನು ತರಲಾಯಿತು.ರಂಜಿತ್ ರವರ ಮೃತದೇಹ ರಾತ್ರಿ 9 ಗಂಟೆ ಸುಮಾರಿಗೆ ಚೆರ್ಕಳ ಕುಂಡಡ್ಕದ ಮನೆಗೆ ತಲಪಿಸಲಾಯಿತು. ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ , ಶಾಸಕರಾದ ಎನ್ . ಎ ನೆಲ್ಲಿಕುನ್ನು , ಸಿ . ಎಚ್ ಕುಂ ಞ೦ಬು , ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖದರ್ ಬದರಿಯಾ ಹಾಗೂ ಜನಪ್ರತಿನಿಧಿಗಳು , ವಿವಿಧ ರಾಜಕೀಯ ಪಕ್ಷಗಳ ಮುಖಂಡರು , ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು .
ಕುಂಞ ಕೇಳು ರವರ ಮೃತದೇಹವನ್ನು 8. 15 ರ ಸುಮಾರಿಗೆ ತೃಕ್ಕರಿಪುರದ ಮನೆಗೆ ತಲಪಿಸಿದ್ದು , ಶಾಸಕ ಎಂ . ರಾಜಗೋಪಾಲನ್, ಉಪ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ , ಹೊಸದುರ್ಗ ತಹಶೀಲ್ದಾರ್ ಎಂ . ಮಾಯಾ ಹಾಗೂ ಇನ್ನಿತರ ನಾಯಕರು , ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು ಅಂತಿಮ ದರ್ಶನಕ್ಕೆ ಆಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು .
ಮೃತದೇಹಗಳನ್ನು ಶುಕ್ರವಾರ ಬೆಳಿಗ್ಗೆ 10.30 ರ ಸುಮಾರಿಗೆ ಕೊಚ್ಚಿಯ ನೆಡುಂಬಾಶ್ಯೇರಿ ವಿಮಾನ ನಿಲ್ದಾಣದಕ್ಕೆ ವಿಶೇಷ ವಿಮಾನದಲ್ಲಿ ತರಲಾಯಿತು.
ಕೇರಳೀಯರ 24 ಸೇರಿದಂತೆ 46 ಮಂದಿಯ ಮೃತದೇಹಗಳನ್ನು ಒಂದೇ ವಿಮಾನದಲ್ಲಿ ತರಲಾಯಿತು,. ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಹಾಗೂ ಇತರ ಅಧಿಕಾರಿಗಳು ಜೊತೆಗಿದ್ದರು. ವಿಮಾನ ನಿಲ್ದಾಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ಪ್ರತಿಪಕ್ಷ ನಾಯಕ ವಿ . ಡಿ ಸತೀಶನ್ , ರಾಜ್ಯದ ಸಚಿವರು ಹಾಗೂ ಸಂಸದರು ಅಂತಿಮ ನಮನ ಸಲ್ಲಿಸಿದರು. ಕೇರಳದ 24 ಮತ್ತು ತಮಿಳುನಾಡಿನ 7 ಮೃತದೇಹಗಳನ್ನು ವಿಶೇಷ ಅಂಬ್ಯಲೆನ್ಸ್ ಮೂಲಕ ಕೊಂಡೊಯ್ಯಲಾಯಿತು . ಕರ್ನಾಟಕದ ಓರ್ವ ಸೇರಿದಂತೆ ಉಳಿದ ರಾಜ್ಯಗಳ ಮೃತದೇಹಗಳನ್ನು ವಿಮಾನ ಮೂಲಕ ದೆಹಲಿಗೆ ಕೊಂಡೊಯ್ಯಲಾಯಿತು