





ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಜುನ್ಜುನುವಿನ ಎಸ್ ಕರಣ್ ಕಾಲೇಜಿನ ಪ್ಯಾರಾಮೆಡಿಕಲ್ ವಿಭಾಗದ ಮುಖ್ಯಸ್ಥ ಕೃಷ್ಣ ಕುಮಾರ್ ಸೈನಿ, ಎಸ್ ಕರಣ್ ಕಾಲೇಜಿನ ರೇಡಿಯಾಲಜಿ ವಿಭಾಗದ ಉಪನ್ಯಾಸಕ ಶಂಕರ್ ಲಾಲ್ ಜಾಟ್, ಪ್ರಭಾ ಮೆಮೋರಿಯಲ್ ಪಿಜಿ ಕಾಲೇಜಿನೊಂದಿಗೆ ಸಂಬಂಧ ಹೊಂದಿರುವ ರಾಮಕೃಷ್ಣ ಮಂಡಿವಾಲ್ ಮತ್ತು ಕಾಲೇಜಿನ ಆಡಳಿತಾಧಿಕಾರಿ ದೇವಕೃಷ್ಣ ಮಂಡಿವಾಲ್ ಬಂಧಿತರು.
ಜೈಪುರದ ಪ್ರಭಾ ದೇವಿ ಮೆಮೋರಿಯಲ್ ಪಿಜಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಲು ಆರೋಪಿಗಳು ಸುಮಾರು 40-45 ಅಭ್ಯರ್ಥಿಗಳಿಂದ ಭಾರಿ ಮೊತ್ತದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಭ್ಯರ್ಥಿಗಳು ಮೊದಲ ವರ್ಷದಲ್ಲಿ ಪಾಸ್ ಆಗದೇ ಉಳಿದಿದ್ದರು. ಅವರನ್ನು ಪಾಸ್ ಮಾಡಲು, ಆರೋಪಿಗಳು ಜೈಪುರ ಪರೀಕ್ಷಾ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸುವುದಾಗಿ ವರದಿ ಮೂಲಕ ತಿಳಿದುಬಂದಿದೆ.








