


ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇದೀಗ ತಮ್ಮ ಬಿರುದನ್ನೇ ಟ್ರೇಡ್ ಮಾರ್ಕ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಕರೆಯುವ “ಕ್ಯಾಪ್ಟನ್ ಕೂಲ್” ಎಂಬ ಪದ ಟ್ರೇಡ್ ಮಾರ್ಕ್ಗಾಗಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಟ್ರೇಡ್‌ಮಾರ್ಕ್‌ಗಳ ನೋಂದಣಿ ಪೋರ್ಟಲ್ ಅನುಮೋದಿಸಿದೆ.
ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿ ಪೋರ್ಟಲ್ ಪ್ರಕಾರ, ಧೋನಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಈ ಬಗ್ಗೆ ಜಾಹೀರಾತು ನೀಡಲಾಗಿದೆ. ಅಲ್ಲದೆ ‘ಕ್ಯಾಪ್ಟನ್ ಕೂಲ್’ ಹೆಸರನ್ನು ಜೂನ್ 16 ರಂದು ಅಧಿಕೃತವಾಗಿ ಟ್ರೇಡ್‌ಮಾರ್ಕ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಈ ಮೊದಲು ಧೋನಿ ‘ಕ್ಯಾಪ್ಟನ್ ಕೂಲ್’ ಟ್ರೇಡ್ಮಾರ್ಕ್ಗಾಗಿ ಅರ್ಜಿ ಸಲ್ಲಿಸಿದಾಗ, ರಿಜಿಸ್ಟ್ರಿ ಟ್ರೇಡ್ ಮಾರ್ಕ್ಸ್ ಕಾಯ್ದೆಯ ಸೆಕ್ಷನ್ 11(1) ರ ಅಡಿಯಲ್ಲಿ ಆಕ್ಷೇಪಣೆಯನ್ನು ಎತ್ತಲಾಗಿತ್ತು. ಈ ದಾಖಲೆಯಲ್ಲಿ ಈಗಾಗಲೇ ಇದೇ ರೀತಿಯ ಹೆಸರಿನ ಗುರುತು ಇರುವುದರಿಂದ ಈ ಹೆಸರು ಜನರನ್ನು ಗೊಂದಲಗೊಳಿಸಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿತ್ತು.
ಆದರೆ ಧೋನಿ ಪರ ವಾದ ಮಂಡಿಸಿರುವ ವಕೀಲರು ‘ಕ್ಯಾಪ್ಟನ್ ಕೂಲ್’ ಎಂಬ ಅಡ್ಡಹೆಸರು ಅವರ ಜೊತೆಗೆ ಸ್ಪಷ್ಟ, ವಿಶಿಷ್ಟ ಸಂಬಂಧವನ್ನು ಹೊಂದಿದೆ. ಅಭಿಮಾನಿಗಳು ಮತ್ತು ಮಾಧ್ಯಮಗಳು ಈ ಅಡ್ಡಹೆಸರನ್ನು ಧೋನಿ ವಿಷಯದಲ್ಲಿ ವರ್ಷಗಳಿಂದ ಬಳಸುತ್ತಿದ್ದಾರೆ. ಅಲ್ಲದೆ ಇದು ಮಹೇಂದ್ರ ಸಿಂಗ್ ಧೋನಿ ಅವರ ಸಾರ್ವಜನಿಕ ಗುರುತಿನ ಭಾಗವಾಗಿದೆ ಎಂದು ವಾದಿಸಿದ್ದರು.
ಈ ವಾದವನ್ನು ಪರಿಗಣಿಸಿರುವ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಧೋನಿಗೆ ‘ಕ್ಯಾಪ್ಟನ್ ಕೂಲ್’ ಪಟ್ಟ ನೀಡಲು ಅನುಮೋದಿಸಿದೆ. ಅದರಂತೆ ಮುಂಬರುವ ದಿನಗಳಲ್ಲಿ ‘ಕ್ಯಾಪ್ಟನ್ ಕೂಲ್’ ಎಂಬುದು ಮಹೇಂದ್ರ ಸಿಂಗ್ ಧೋನಿಗೆ ಮಾತ್ರ ಸೀಮಿತವಾಗಲಿದೆ. ಈ ಟ್ಯಾಗ್‌ಲೈನ್ ಅನ್ನು ಮತ್ತೊಬ್ಬರು ಬಳಸುವಂತಿಲ್ಲ.
ಮಹೇಂದ್ರ ಸಿಂಗ್ ಧೋನಿ ‘ಕ್ಯಾಪ್ಟನ್ ಕೂಲ್’ ಟ್ಯಾಗ್‌ಲೈನ್‌ನೊಂದಿಗೆ ಹೊಸ ಬ್ರ‍್ಯಾಡಿಂಗ್ ಮಾಡುವ ನಿರೀಕ್ಷೆಯಿದೆ. ಅದರಂತೆ ಧೋನಿ ಮುಂಬರುವ ದಿನಗಳಲ್ಲಿ ತಮ್ಮ ಕ್ರೀಡಾ ಸಂಸ್ಥೆಗಳು, ತರಬೇತಿ ಕೇಂದ್ರಗಳು ಮತ್ತು ಬ್ರಾಂಡ್ ಉತ್ಪನ್ನಗಳಂತಹ ವಿವಿಧ ವ್ಯವಹಾರ ಚಟುವಟಿಕೆಗಳಿಗೆ ಕ್ಯಾಪ್ಟನ್ ಕೂಲ್ ಪದವನ್ನು ಪ್ರತ್ಯೇಕವಾಗಿ ಬಳಸಬಹುದು. ಇದು ಧೋನಿಯ ಬ್ರ‍್ಯಾಂಡ್‌ನ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.