ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳ ಅಡಿ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿರುವಂತಹ ಘಟನೆ ವಿಜಯಪುರ ಅಲಿಯಾಬಾದ್ ಬಳಿಯ ಕೈಕಾರಿಕಾ ಪ್ರದೇಶದಲ್ಲಿರುವ ಗೋದಾಮಿನಲ್ಲಿ ನಡೆದಿದೆ.
ಮೆಕ್ಕೆಜೋಳದ ಮೂಟೆಗಳು ಬಿದ್ದು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 4 ಜೆಸಿಬಿಗಳ ಮೂಲಕ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳಕ್ಕೆ ಎಸ್ಪಿ, ಋಷಿಕೇಶ ಸೋನೆವಣೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಿಹಾರ ಮೂಲದ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ರಾಜಗುರು ಇಂಡಸ್ಟ್ರೀಸ್ ಅವರ ಆಹಾರ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಸಾಯಂಕಾಲ ಮೆಕ್ಕೆಜೋಳ ತುಂಬಿದ್ದ ಚೀಲಗಳನ್ನು ಜೋಡಿಸುವ ಕೆಲಸದಲ್ಲಿ ತೊಡಗಿದ್ದರು ಈ ವೇಳೆ ಅವಘಡ ಉಂಟಾಗಿದೆ.ಸ್ಥಳದಲ್ಲಿರುವ ಕಾರ್ಮಿಕರು ಹೇಳುವ ಪ್ರಕಾರ, ಮೆಕ್ಕೆಜೋಳದ ಚೀಲಗಳ ಅಡಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದು, 3-4 ಕಾರ್ಮಿಕರು ರಕ್ಷಣೆಗೆ ಕೂಗಿಕೊಳ್ಳುವ ಧ್ವನಿ ಕೇಳಿಸುತ್ತಿದೆ ಎಂದು ಹೇಳಿದ್ದಾರೆ.
ಮೆಕ್ಕೆಜೋಳದ ಅಡಿಯಲ್ಲಿ ಸಿಲುಕಿದವರೆಲ್ಲ ಬಿಹಾರ ಮೂಲದ ಕಾರ್ಮಿಕರಾಗಿದ್ದು, ಕಳೆದ ಹಲವು ವರ್ಷಗಳಿಂದ ಇದೇ ಇಂಡಸ್ಟ್ರೀಜ್ನಲ್ಲಿ ಕೆಲಸ ಮಾಡುತ್ತಿದ್ದರು.ನಾಲ್ಕು ಜೆಸಿಬಿಗಳಿಂದ ಕಳೆದ ಎರಡು ಗಂಟೆಗಳಿಂದ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಾಥ್ ನೀಡಿದ್ದು, ಸ್ಥಳಕ್ಕೆ ಎರಡು ಕ್ರೇನ್ ಹಾಗೂ ಎರಡು ಆಂಬ್ಯುಲೆನ್ಸ್, ಜನರೇಟರ್ಗಳನ್ನು ತರಿಸಲಾಗಿದೆ