Monday, January 25, 2021

ಮಮತಾ ಹೃದಯಿಯಾಗು

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರುದ.ಕ.ಲೇಖಕರು ಕವಯಿತ್ರಿ

ಬೆಳಕು ನೀಡುವ ಭಾನುವಿಗೆ ಇರುಳಿನ ಮೇಲೆ ತಾತ್ಸಾರ. ಅದಕ್ಕೆ ಆತ ಇರುಳಿನಲ್ಲಿ ಬರುವುದೇ ಇಲ್ಲ. ಕಗ್ಗತ್ತಲೆಂದರೆ ಆತನಿಗೂ ಹೆದರಿಕೆಯೋ ಏನೋ ! ಇನ್ನು ಚಿಕ್ಕ ಪುಟ್ಟ ಮಕ್ಕಳು ಹೆದರದೇ ಇರುವರೇ? ಅಂತೂ ಹಿಂದಿನ ಕಾಲದ ಕಟ್ಟುಕತೆಗಳು, ಅಜ್ಜಿಕತೆಗಳು ಮಕ್ಕಳಿಗೆ ಎಷ್ಟು ಮನರಂಜನೆ ಕೊಡುತ್ತಿತ್ತೋ ಅಷ್ಟೇ ಪ್ರಾಕೃತಿಕವಾಗಿಯೂ ಪರಿಣಾಮ ಬೀರಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆಧುನಿಕ ಜಗತ್ತಿನಲ್ಲಿ ಇದರ ಪ್ರಭಾವವೆಲ್ಲ ವಿದ್ಯುಚ್ಛಕ್ತಿಯಿಂದ ಹಾಗೂ ಸೋಲಾರಿನಿಂದ ಸಂಪೂರ್ಣ ನಿಂತುಹೋಗಿದೆಯೆಂದೇ ಹೇಳಬಹುದು.

ಸೂರ್ಯಚಂದ್ರರ ಅವಿರತ ಕಾರ್ಯಗಳಂತೆ ನಾವೂ ಶ್ರಮವಹಿಸುತ್ತಿರಬೇಕು. ಆಯಾಸವಾಯಿತೆಂದೋ ಅಥವಾ ಬೇರೇನೋ ಕಾರಣಗಳಿಂದಾನೋ ಕಾರ್ಯಗಳನ್ನು ಮುಂದಕ್ಕೆ ಹಾಕುವವರಿಗೇನೂ ಕೊರತೆಯಿಲ್ಲ. ಸಾಧನೆಯ ಪಥದಲ್ಲಿ ಅನೇಕ ಕಲ್ಲುಮುಳ್ಳುಗಳಿದ್ದಾಗ್ಯೂ ಸಂಭಾಳಿಸಿಕೊಂಡು ಹೋಗೋದಿದೆಯಲ್ಲ ಅದುವೇ ದೊಡ್ಡ ವಿಜಯವೆನ್ನಬಹುದು. ಅದಕ್ಕಾಗಿ ಬಹುಮಾನಗಳು ಬೇಕಿಲ್ಲ. ಮನದೊಳಗಿನ ಆತ್ಮವಿಶ್ವಾಸದ ಬೆಳಕೇ ಸಾಕು.

ಬರೀ ಎಲ್ಲೆಲ್ಲೂ ಕತ್ತಲೆ ತುಂಬಿದಾಗ ಅಂದಾಜಿನ ಮೇಲೆ ನಡೆಯುವ ಕ್ರಮವಿರುವುದು ಸಹಜ. ಆದರೆ ಅದು ಪರಿಚಿತ ಸ್ಥಳಗಳಲ್ಲಿ ಮಾತ್ರ. ಅಪರಿಚಿತ ಸ್ಥಳಗಳಲ್ಲಿ ಕತ್ತಲಲ್ಲಿ ಕಾಲಿಡಲೂ ಭಯವಾಗುವುದು. ಆಗ ಒಂದು ಸಣ್ಣ ಮಿಂಚು ಹುಳ ಬಂದರೂ ಸಾಕು ಕಣ್ಣ ನೋಟ ನೆಲೆಯಾಗುವುದು. ನಮ್ಮೊಳಗಿನ ಕತ್ತಲೆಯೂ ಸಹ ಅಷ್ಟೇ ಹೆದರಿಕೆ ಹುಟ್ಟಿಸುವಂತಹದ್ದು. ಅದನ್ನು ಹೊಡೆದೋಡಿಸಲು (ಆಂತರಿಕ)ಅಂತರಂಗದ ಹಣತೆ ಅತೀ ಅಗತ್ಯ. ಅದು ಎಲ್ಲೋ ಎರವಲು ಕೊಟ್ಟು ಪಡೆಯುವಂತಹುದೂ ಅಲ್ಲ. ನಮ್ಮ ಮನದ ಭಾವನೆಗಳಿಗೆ ಆತ್ಮನ ದರ್ಶನದ ಸ್ಥಿತಿಗತಿಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದರಿಂದ ದೊರಕಲ್ಪಡುತ್ತದೆ. ಮನೆಯ ನೆಲವನ್ನು ದಿನವೂ ಗುಡಿಸುವುದರಿಂದ ನೆಲದಲ್ಲಿನ ಕಸಕಡ್ಡಿಗಳು ಹೇಗೆ ತೊಲಗುವುದೋ ಅದೇ ರೀತಿ ಮನವನ್ನು ಸದ್ಚಿಂತನೆಯಿಂದ ಸದಾ ಶುಚಿಗೊಳಿಸುತ್ತಿರಬೇಕು. ಆಗ ಬೆಳಕಿನ ರಂಧ್ರಗಳು ಹಾಯಲಾರಂಭಿಸುತ್ತವೆ.

ಸದಾ ಓಡಿಯಾಡುತ್ತಿರುವ ಮಗುವಿಗೂ, ಕುಳಿತಲ್ಲೇ ತಿಂದುಂಡು ಬೆಳೆಯುವ ಮಗುವಿಗೂ ತುಂಬಾನೇ ವ್ಯತ್ಯಾಸವಿರಬಹುದು. ದೈಹಿಕ ಚಟುವಟಿಕೆಗಳು ಬಹುತೇಕ ಆಂತರಿಕ ಬೆಳವಣಿಗೆಗೂ ಸಹಕಾರಿಯಾಗಿರುತ್ತವೆ ಎಂಬುದನ್ನು ನೆನಪಿಡುವುದು ಉತ್ತಮ. ಅದಕ್ಕೆ “ಕೂಸಿದ್ದ ಮನೆಗೆ ಬೀಸಣಿಕೆ ಯಾತಕ ” ಅಂದಿದ್ದಾರೆ ಹಿಂದಿನ ಜನಪದರು. ಮಗು ಸುಮ್ಮನೆ ಕೂರೋದು ಕಡಿಮೆ. ಅದೂ ಹಿಂದಿನ ಕಾಲದಲ್ಲಿ. ಕರೆಂಟಿಲ್ಲ. ಈಗಲೋ ಬಿಡಿ! ಹುಟ್ಟೋವಾಗ್ಲೇ ಮೊಬೈಲ್, ಕಂಪ್ಯೂಟರ್, ಟಿ.ವಿ ಎಂದು ಏನೇನೋ ನೋಡ್ತಾ ಮಂಕುದಿಣ್ಣೆಗಳಂತೆ ಬೆಳೆಸುವುದು ಕೆಟ್ಟ ಚಾಳಿಯಾಗಿಬಿಟ್ಟಿದೆ.

ಮನುಷ್ಯರು ಸದಾ ಕ್ರಿಯಾಶೀಲರಾಗಿ ಇರಬೇಕು ಅಂತಾದರೆ ಪುರುಸೊತ್ತು ಎಂಬುದು ಇರಲೇಬಾರದು. ಆಗ ಮಸ್ತಕವು ಕಾಲಹರಣ ಮಾಡದೇ ತನ್ನದೇ ಕೆಲಸದಲ್ಲಿ ಶ್ರಮವಹಿಸುತ್ತ ಸಾರ್ಥಕ್ಯದತ್ತ ಕೊಂಡೋಗುವಲ್ಲಿ ಸಹಕರಿಸುತ್ತದೆ. ಅದೇ ಕೆಲಸವಿಲ್ಲದೇ ಕುಳಿತ ಮನಸ್ಸು ಏನೇನೋ ಯೋಚಿಸುತ್ತ ಕಾಲಹರಣ ಮಾಡಿ ವಿನಾಃ ಕಾರಣ ಸಂದೇಹಗಳನ್ನು ಹುಟ್ಟುಹಾಕುವತ್ತ ಸಾಗುತ್ತದೆ. ಅದಕ್ಕಾಗಿಯೇ ಒದಗಿಬಂದ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿರಬೇಕು.ಅದೂ ಹೇಗೆ ಅಂದ್ರೆ ತಾನು ಹೊಗಳಿಕೊಂಡೂ ಅಲ್ಲ ಅಥವಾ ಇತರರಿಂದ ಹೊಗಳಿಸಿಕೊಳ್ಳುತ್ತಲೂ ಅಲ್ಲ.

ಏನೂ ಸದ್ದೇ ಮಾಡದೇ ಹೂವು ಅರಳುತ್ತದೆ. ಅದು ಎಂದಾದರೂ ಸಾರಿಕೊಂಡು ಹೇಳಿದ್ದಿದೆಯಾ? ಬೆಳಗಾಗುವಾಗ ಉದಯ ಕಾಲದ ಸಮಯದಲ್ಲಿ ಡೋಲು ನಗಾರಿ ಬಾರಿಸುವುದು ಕೇಳುವುದೇ ಇಲ್ಲ! ಆದರೂ ಎಷ್ಟು ಸೊಗಸಾಗಿ ಠೀವಿಯಿಂದ ಸುಮ್ಮನೆ ಕಿರಣ ಬೀರುತ್ತಾ ಬಾಗುತ್ತಾ ಬರುತ್ತಾನೆ ನಮ್ಮ ಸೂರ್ಯ. ರಾತ್ರಿಯಾದಾಗ ಚಂದ್ರನೂ ಅಷ್ಟೇ. ಬೆಳದಿಂಗಳ ಸೊಗಸನ್ನು ಉಣಬಡಿಸುವಾಗಲೂ ನೀರವತೆಯಿಂದಿರುತ್ತಾನೆ. ಇಂತಹ ಗುಣಗಳು ಮನುಷ್ಯರಿಗೂ ಬರಬೇಕು. ಆಗಲೇ ಲೋಕೋದ್ಧಾರವಾಗುವುದು.

ದೇವರು ದಯಪಾಲಿಸಿದ ಈ ದೇಹವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದನ್ನು ಪರೋಪಕಾರಕ್ಕೆ ಆದಷ್ಟೂ ಬಳಸಬೇಕು. ಹಾಗೆ ಬಳಸಲು ಸಾಧ್ಯವಿಲ್ಲವೆಂದಾದರೆ ಬಿಟ್ಟು ಬಿಡಿ. ತಮ್ಮಷ್ಟಕ್ಕೆ ತಾವಿರೋದು ಸಾವಿರ ಪಾಲು ಶ್ರೇಷ್ಠ. ಆದರೆ ಇನ್ನೊಬ್ಬರಿಗೆ ಕಿಚ್ಚಿಟ್ಟು ಮಾತ್ರ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಮ್ಮೊಳಗೇ ಆ ದೇವರು ನೆಲೆಯಾಗಿರುವಾಗ ನ್ಯಾಯದ ಪೆಟ್ಟಿಗೆ ಆತ್ಮವೇ ಆಗಿರುತ್ತದೆ. ಅದನ್ನು ಅನ್ಯಾಯಕ್ಕೋ ಅಥವಾ ಇತರ ಕೆಲಸಕ್ಕೆ ಬಾರದ ವ್ಯರ್ಥ ಪ್ರಯತ್ಕಕ್ಕೋ ಉಪಯೋಗಿಸಲು ಮನಸ್ಸು ಕೇಳದು.

ಸಂಸ್ಕಾರ, ಸಂಸ್ಕೃತಿಯಿದ್ದಲ್ಲಿ ಭಾಷೆ ಸುಂದರವಾಗಿರುತ್ತದೆ. ದ್ವೇಷದಿಂದ ಸಣ್ಣ ಕಿಡಿಯು ಕೂಡ ಕಾಳ್ಗಿಚ್ಚಾಗಬಹುದು. ಆದರೆ ಅದೇ ಕಿಡಿಯು ಪ್ರೀತಿಯಿಂದ ನಂದಾದೀಪವಾಗಿಯೂ ಬೆಳಕಾಗಬಲ್ಲುದು. ಅದನ್ನು ಹೇಗೆ ಉಪಯೋಗಿಸೋದು ಅನ್ನೋ ಜಾಣ್ಮೆ ಹಾಗೂ ತಾಳ್ಮೆ ನಮ್ಮಲ್ಲಿ ಇರಬೇಕು. ದೀಪ ಬೆಳಗಲು ಬೆಂಕಿಕಡ್ಡಿ ಅವಶ್ಯಕ. ಆ ಬೆಂಕಿಕಡ್ಡಿಯನ್ನು ಕೂಡಾ ದೊಡ್ಡ ಮರದಿಂದಲೇ ತಯಾರಿಸುವುದು. ಸಣ್ಣ ತುಣುಕು ಕೂಡಾ ಕೆಲವೊಮ್ಮೆ ಹೆಚ್ಚು ಬೆಲೆ ತೆರಬೇಕಾದ ಪರಿಸ್ಥಿತಿ ತಂದೊಡ್ಡುತ್ತದೆ.

ಮರವು ತಾನು ಎತ್ತರಕ್ಕೆ ಬೆಳೆದು ನಿಂತಾಗ ಹುಲ್ಲನ್ನು ನೋಡಿ ಅಣಕಿಸುತ್ತದೆ. ನಾನೆಷ್ಟು ಎತ್ತರ ಬೆಳೆದಿದ್ದೇನೆ, ನೀನು ಇಷ್ಟೆತ್ತರ ಏರಬಲ್ಲೆಯಾ ಎಂದು ಹುಲ್ಲನ್ನು ಪ್ರಶ್ನಿಸುತ್ತದೆ. ಆದರೆ ಹುಲ್ಲು ಜಂಭ ಕೊಚ್ಚಿಕೊಳ್ಳುವುದಿಲ್ಲ. ಕಾಲವೇ ಬುದ್ಧಿ ಹೇಳಿಕೊಡುತ್ತದೆ ಎಂದು ಸುಮ್ಮನಾಗುತ್ತದೆ. ಒಂದಿನ ಬಲವಾದ ಗಾಳಿ ಬೀಸಲಾರಂಭಿಸುತ್ತದೆ. ಕಾರ್ಮೋಡ ಕವಿಯುತ್ತದೆ. ಇನ್ನೇನು ಮಳೆ ಬರುವ ಮುನ್ಸೂಚನೆ ಅದಾಗಿರುತ್ತದೆ. ಪ್ರಚಂಡವಾದ ಗಾಳಿ ಬೀಸಲಾರಂಭಿಸಿದಾಗ ಅದರ ಬಲವಾದ ಹೊಡೆತಕ್ಕೆ ತತ್ತರಿಸಿ ಹೋಗಲಾರಂಭಿಸುತ್ತದೆ ಮರ. ಇನ್ನೇನು ಮರ ಬಿದ್ದೇಬಿಡ್ತು ಅನ್ನೋವಾಗ ಹುಲ್ಲುಗಳ ಸ್ಪರ್ಶದಿಂದ ಧರೆಗೆ ಅಪ್ಪಳಿಸಿದರೂ ಮರಕ್ಕೆ ಒಂದಿನಿತೂ ನೋವಾಗದ ಹಾಗೆ ಆ ಹುಲ್ಲುಗಳು ಕಾಪಾಡುತ್ತವೆ. ಹಾಗಾಗಿ ಯಾರನ್ನೂ ಬಾಹ್ಯ ಸ್ಥಿತಿಯಿಂದ ದೊಡ್ಡವ, ಸಣ್ಣವ, ಬಡವ, ಶ್ರೀಮಂತ ಎಂದು ವ್ಯತ್ಯಾಸವೇರ್ಪಡಿಸಬಾರದು. ಗುಣಕ್ಕಿಂತ ದೊಡ್ಡದಾದುದು ಯಾವುದೂ ಇಲ್ಲ ಎಂದರಿತು ಆ ಮರ ಪ್ರಾಯಶ್ಚಿತ್ತಗೊಳ್ಳುತ್ತದೆ..

ಮನುಷ್ಯರು ಹೀಗೇ ಕೆಲವೊಮ್ಮೆ ಆ ಮರದಂತೆ ಭಾವಿಸುತ್ತ ಜಂಭ ಪಟ್ಟುಕೊಳ್ಳುತ್ತಾರೆ. ಆದರೆ ಸದ್ಗುಣಕ್ಕೆ ಸಿರಿತನ, ಬಡತನವೆಂಬ ಭೇದಭಾವವಿಲ್ಲ. ಎಲ್ಲರ ಹೃದಯದಲ್ಲೂ ಸದ್ಗುಣವೇ ತುಂಬಿರಲು ಈ ಲೋಕವೇ ಸ್ವರ್ಗವಾಗುವುದು. ಮನುಷ್ಯಜನ್ಮ ಸಾರ್ಥಕವಾಗೋದು ಈ ಗುಣದಿಂದ ಹೊರತು ಅವರಲ್ಲಿರುವ ಅಷ್ಟೈಶ್ವರ್ಯಗಳಿಂದಲ್ಲ, ಹುದ್ದೆಯಿಂದಲೂ ಅಲ್ಲ, ಮಮತಾಹೃದಯದಿಂದ. ಇದನರಿತು ಬಾಳಿದಾಗ ಸುಂದರವೆಂದೆಂದೂ ಈ ಜಗ..

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರುದ.ಕ.ಲೇಖಕರು ಕವಯಿತ್ರಿ
mallikajrai9@gmail.com

- Advertisement -

MOST POPULAR

HOT NEWS

Related news

LEAVE A REPLY

Please enter your comment!
Please enter your name here

error: Content is protected !!