Saturday, May 15, 2021
spot_imgspot_img
spot_imgspot_img

“ಸಿರಿವಂತಿಕೆ ಮನದೊಳಗಿದ್ದರೆ ಚೆನ್ನ”

- Advertisement -
- Advertisement -

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು

ರ್ಹತೆಯಿಲ್ಲದವರಿಗೆ ಕೊಡ(ಸಿಗ)ಬಾರದು ಎಂಬ ಮಾತೊಂದಿದೆ. ಅನುಭವಸಿದ್ಧವಾದ ಜ್ಞಾನವನ್ನು ಅರ್ಹತೆಯಿಲ್ಲದವರಿಗೆ ನೀಡಿದರೆ ಅದು ಎಂದಿಗೂ ದಕ್ಕುವುದಿಲ್ಲ. ಭಗವಂತ ಯಾವ ರೂಪದಲ್ಲಿ ಹೇಗೆ ಬರುತ್ತಾನೆಂಬುದು ಅರಿವಿಗೆ ಬಾರದು.

ದೂರದಲ್ಲೆಲ್ಲೋ ಕೇಳಿಸುತ್ತಿದ್ದ ಲಾರಿಯ ಹಾರನ್ ಹತ್ತಿರವಾಗುತ್ತ ಬರುತ್ತದೆ. ಹಾಗೆಯೇ ಇನ್ನೂ ಹತ್ತಿರಕ್ಕೆ ಬಂದು ಮತ್ತೆ ಕೇಳದಾಗುತ್ತದೆ.ಎಲ್ಲೋ ಅರಳಿದ ಮಲ್ಲಿಗೆ ಹೂವಿನ ಇರುವಿಕೆಯು ತಿಳಿಯದಿದ್ದರೂ ಅದರ ಸುವಾಸನೆ ಮೂಗಿಗೆ ಬಂದು ಬಡಿದಾಗ ಇಲ್ಲೇ ಎಲ್ಲೋ ಹತ್ತಿರದಲ್ಲೇ ಮಲ್ಲಿಗೆ ಹೂವಿದೆಯೆಂಬ ಅನುಭವಕ್ಕೆ ಬರಲಾಗುತ್ತದೆ. ಮಾವಿನ ಮರ ಸೊಂಪಾಗಿ ಚಿಗುರಿದ ಸಮಯದಲ್ಲಿ ಎಲೆಗಳು ನಿಬಿಡತೆಯಿಂದ ತುಂಬಿರುತ್ತದೆ. ಆಗಲೇ ಕುಹೂ ಕುಹೂ ಎಂಬ ಮಧುರ ಉಲಿ ಕೇಳಿದಾಗ ಅಲ್ಲೇ ಎಲ್ಲೋ ಕೋಗಿಲೆಯಿರಬಹುದೆಂದು ಅರಿವಾಗುತ್ತದೆ.

ರಾತ್ರಿ ಮಲಗುವಾಗ ಸೊಳ್ಳೆ ಬರಬಾರದೆಂದು ಫ್ಯಾನ್ ಹಾಕಿ ಮಲಗುವ ಕ್ರಮ ಎಲ್ಲರದು.ಫ್ಯಾನ್ ನ ತಿರುಗುವ ಶಬ್ದವೇ ಕೆಲವರಿಗೆ ಅಪ್ಯಾಯವಾಗಬಹುದು. ಹಾಗಾಗಿಯೇ ಈಗಿನ ಕಾಲದ ಮಕ್ಕಳು ಫ್ಯಾನ್ ನ ತಿರುಗುವ ಶಬ್ದ ಕೇಳದೆ ನಿದ್ದೆಯೇ ಮಾಡುವುದಿಲ್ಲ. ಹಿಂದಿನ ಕಾಲದ ಮಕ್ಕಳು ಅದೃಷ್ಟವಂತರೆಂದು ಹೇಳಬಹುದು! ಕರೆಂಟಿನ ಹಾವಳಿಯೂ ಇರಲಿಲ್ಲ. ಜೊತೆಗೆ ಸೊಳ್ಳೆಯೂ ಕೂಡಾ. ಹೊಸ ಹೊಸ ಆವಿಷ್ಕಾರಗಳಾದಂತೆ ಹೊಸ ಹೊಸ ಜೀವಿಗಳು ಉತ್ಪನ್ನವಾಗುತ್ತವೆ. ಅದಕ್ಕೆ ಈಗಿನ ಪರಿಸ್ಥಿತಿಯೇ ಸಾಕ್ಷಿಯಾಗಿ ನಿಂತಿದೆ.

ಕಷ್ಟ ಮನುಷ್ಯನಿಗೆ ಬಾರದೇ ಇನ್ನೇನು ಕಲ್ಲು ಮರಗಳಿಗೆ ಬರುವುದೇ ಎಂಬ ಹಿರಿಯರ ಅನುಭವದ ನುಡಿಗಳು ಅಮೃತ ಪಾನದಂತೆ ಆಗಿವೆ. ಕಷ್ಟವೆಂದುಕೊಂಡರೆ ಕಷ್ಟ. ಅದನ್ನೇ ಇಷ್ಟ ವಾಗಿಸಿಕೊಳ್ಳಬಯಸಿದರೆ ಅದಕ್ಕಿಂತ ದೊಡ್ಡ ಲಾಭ ಮತ್ತೊಂದಿಲ್ಲ. ನಡೆಯುವುದು ಕೆಲವರಿಗೆ ಕಷ್ಟವಾಗಿ ತೋರಬಹುದು. ಆದರೆ ಆರೋಗ್ಯಕ್ಕೆ ಅದುವೇ ರಹದಾರಿ ತಾನೇ. ನಡೆದುಕೊಂಡು ಹೋಗುವವರ ಬಗ್ಗೆ ಎಂದಿಗೂ ಕೀಳರಿಮೆ ಸಲ್ಲ. ಅವರು ಆರೋಗ್ಯದ ಸಿರಿವಂತರೇ ಹೌದು. ದೇಹದ ಆರೋಗ್ಯಕ್ಕೆ ದೈಹಿಕ ಶ್ರಮ ಬೇಕೇ ಬೇಕು.

ಹೀಗಿರುವಾಗ ಎಷ್ಟೇ ಸಿರಿವಂತರಾದರೂ ತನ್ನ ದೇಹಕ್ಕೆ ಕಠಿಣ ವ್ಯಾಯಾಮ ನೀಡಲೇಬೇಕು. ಹಾಗಾಗಿ ಯಾರೂ ಯಾರನ್ನೂ ಕೀಳಾಗಿ ಕಾಣುವ ಪ್ರಮೇಯವೇ ಇರುವುದಿಲ್ಲ. ದೊಡ್ಡ ಕಾರಲ್ಲಿ ಹೋಗುವ ಮಂದಿ ಆರೋಗ್ಯವಂತರೆಂದೇ ಹೇಳಲಾಗದು. ದೈಹಿಕ ಸಮಸ್ಯೆಗಳಿದ್ದರಂತೂ ಆಗ ಅವರೇ ಒಂದರ್ಥದಲ್ಲಿ ನಿಜವಾದ ಬಡವರಾಗಿರುತ್ತಾರೆ.

ಬಿಸಿಲಿನಲ್ಲಿ ನಡೆದು ಅಭ್ಯಾಸವಿರುವವರು ಎಂತಹ ಕಠಿಣ ಬೇಗೆಯನ್ನೂ ತಾಳಿಕೊಳ್ಳಬಲ್ಲವ ರಾಗಿರುತ್ತಾರೆ. ದಿನವೂ ಹವಾನಿಯಂತ್ರಿತ ಕೊಠಡಿಯಲ್ಲಿದ್ದವರಿಗೆ ಬಿಸಿಲು ಅನ್ನೋದು ಒಂದು ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಪ್ರಕೃತಿಯೊಡನೆ ಜೊತೆ ಜೊತೆಯಾಗಿ ಬಾಳುವುದು ಕಲಿಯಬೇಕು. ಆಗಲೇ ಬದುಕು ಆನಂದದ ಹೊನಲಾಗುತ್ತದೆ. ಹಾಗೆಯೇ ಮಳೆಯಲ್ಲಿ ಕೊಡೆ ಹಿಡಿದು ನಡೆಯುತ್ತ ಕೈಯಿಂದ ಹನಿಗಳ ಜೊತೆ ಆಟವಾಡುತ್ತ ಸಂತೋಷಪಡುವ ಕ್ಷಣಗಳು ಜೀವನದ ಅಮೂಲ್ಯ ರಸಗಳಿಗೆಯೆಂದೇ ಹೇಳಬಹುದು. ಆ ಮೃದು ಮಧುರ ಸ್ಪರ್ಶಕ್ಕೆ ಆ ನೀರಹನಿ ಕೈಯೊಳಗೆ ಸೇರಿ ಜಾರಿದಾಕ್ಷಣವನ್ನು ಅನುಭವಿಸಿದಷ್ಟೇ ಸುಲಭವಾಗಿ ವರ್ಣಿಸಲು ಅಸಾಧ್ಯದ ಮಾತೇ ಸರಿ.

ಸಂತೋಷದ ಸವಿಯನ್ನನುಭವಿಸಲು ಯಾವುದೇ ಡಿಗ್ರಿ ಅಥವಾ ಹುದ್ದೆಗಳ ಅಗತ್ಯವಿಲ್ಲ. ಅದು ಪ್ರಕೃತಿಯಲ್ಲಿ ತನ್ನಿಂತಾನೇ ದೊರಕುವ ನಿಧಿ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡಾಗಲೇ ಸಂತೋಷದ ಕ್ಷಣಗಳು ಅಕ್ಷಯವಾಗುತ್ತವೆ. ಕೆಲವರಿಗೆ ತಲೆಯಲ್ಲಿ ಆಳವಾಗಿ ಬೇರುಬಿಟ್ಟ ವಿಷಯವೆಂದರೆ ಒಳ್ಳೆಯ ಹುದ್ದೆ ದೊರಕಿದ ಬಳಿಕ ಒಳ್ಳೆಯ ಸಂಪಾದನೆಯಿದ್ದರೆ ಮಾತ್ರ ನೆಮ್ಮದಿ ಸಿಗುವುದೆಂಬ ಭ್ರಮೆಯಿರುತ್ತದೆ. ಅದು ನಿಜವಾಗಿಯೂ ತಪ್ಪು ಕಲ್ಪನೆ. ಹಾಗಿರುತ್ತಿದ್ದರೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳು ಸುಖ ಸಂತೋಷದಲ್ಲೇ ತೇಲಾಡಬೇಕಿತ್ತು. ಆದರೆ ನಿಜವಾದ ಸಂತೋಷವಿರುವುದು ಶ್ರೀಮಂತಿಕೆಯಲ್ಲಿ ಅಲ್ಲ!! ನಾವು ಅನುಭವಿಸುವ ಸಣ್ಣ ಪುಟ್ಟ ಘಟನೆಗಳಲ್ಲಿಯೇ ಸಂತೋಷದ ಕ್ಷಣಗಳನ್ನು ಹುಡುಕಬೇಕು. ಅದು ಕಳೆದುಹೋಗದಂತೆ ಎಚ್ಚರವಿರಿಸಬೇಕು.

ಜೋರಾಗಿ ಮಳೆ ಬರುವಾಗ ಆಲಿಕಲ್ಲುಗಳು ಕೆಲವೊಮ್ಮೆ ಬೀಳುತ್ತವೆ. ಆಗಲೇ ಕೊಡೆ ಹಿಡಿದು ಅದನ್ನು ಹೆಕ್ಕಿ ಗಾಜಿನ ಬಾಟಲಿಯಲ್ಲಿ ಭದ್ರವಾಗಿ ತುಂಬಿಸುವುದರಲ್ಲಿದೆ ನಿಜವಾದ ಖುಷಿ. ಅಂದ್ರೆ ಸಂತೋಷ. ಅದು ಕರಗಿ ನೀರಾಗುವುದೆಂದು ಅರಿತಿದ್ದರೂ ಮಕ್ಕಳಿಗೆ ಹೆಕ್ಕುವಿಕೆಯಲ್ಲಿನ ಆ ಖುಷಿ ಬೇರೆ ಇನ್ನಾವುದರಲ್ಲಿ ಸಿಗಲು ಸಾಧ್ಯವಿದೆ. ಆ ಸಮಯಕ್ಕೆ ಮಾತ್ರ ಅದು ಸಿಗುವಂತಾದ್ದು. ಮಳೆ ಬಿಟ್ಟ ಮೇಲೆ ಹೆಕ್ಕುವೆನೆಂದರೆ ಅದು ಮೂರ್ಖತನದ ಮಾತಾಗಬಹುದು.ಅಲ್ಲದೇ ಅದು ಕರಗಿ ನೀರಾಗಿ ಹೋಗಿರುತ್ತದೆ. ಆಲಿಕಲ್ಲುಗಳ ಸ್ಪರ್ಶ ಹಿತವನ್ನು ಅನುಭವಿಸುವ ಅವಕಾಶವನ್ನು ಕಳೆದುಕೊಂಡು ಬಿಡುತ್ತೇವೆ.

ಮೊನ್ನೆ ಹೀಗೇ ಒಬ್ರು ಮಾತಾಡ್ತಾ ಆತನಿಗೆ ಐದಾರು ಲಕ್ಷ ತಿಂಗಳಿಗೆ ಸಂಬಳವಿದೆ ಅಂದ್ರು.ಅವರ ಧ್ವನಿಯಲ್ಲಿ ಅದೇ ಒಂದು ದೊಡ್ಡ ನಿಧಿಯಂತೆ ಅನಿಸುತ್ತಿತ್ತು. ಅದಕ್ಕೆ ಮತ್ತೊಬ್ಬರು ಕಿವಿಕೊಡುತ್ತಿದ್ದವರು ಅಂದೇ ಬಿಟ್ಟರು. ಎಷ್ಟೇ ಇರಲಿ ಹಸಿವಾದಾಗ ತುತ್ತು ಅನ್ನ, ಸಾರು ಇದ್ದರೆ ಅದೇ ಮೃಷ್ಟಾನ್ನ.

ಅಷ್ಟು ಸಂಬಳ ಇರುವವನೂ ಅದನ್ನೇ ತಿನ್ನುವುದು.ದಿನಗೂಲಿ ಕಾರ್ಮಿಕನೂ ಅದೇ ಅನ್ನ ಸಾರು ಉಣ್ಣುವುದು. ಯಾರಿಗೆ ಹೆಚ್ಚು ಸಂತೋಷವಾಗುವುದು ಎಂಬ ಕುತೂಹಲವಿದ್ದರೆ ಕೇಳಿ, ದಿನಗೂಲಿ ಕಾರ್ಮಿಕನೇ ನಿಜವಾದ ತೃಪ್ತಿಯನ್ನು ಹೊಂದಿದವನಾಗಿರುತ್ತಾನೆ. ಹಾಗಾಗಿ ಬದುಕಲಿಕ್ಕಾಗಿ ತಿನ್ನಬೇಕೇ ಹೊರತು ತಿನ್ನಲಿಕ್ಕಾಗಿಯೇ ಬದುಕಬಾರದೆಂಬ ನೀತಿಯನ್ನು ತಿಳಿದುಕೊಂಡರೆ ಉತ್ತಮ. ಅದೇ ಸಿರಿವಂತ ಅಗತ್ಯವುಳ್ಳವರಿಗೆ(ಒಂದಂಶ) ನೀಡಿದರೆ ಆತನೂ ಪರಮಸುಖಿಯಾಗಲು ಸಾಧ್ಯ.

ಇತ್ತೀಚೆಗೆ ಯಾರಿಗೂ ಯಾವುದರಲ್ಲಿಯೂ ಉತ್ಸಾಹವೇ ಇಲ್ಲವೆಂದು ಹೇಳುವವರು ಬಹಳ ಮಂದಿ. ಯಾಕಾಗಿ? ಅನ್ನೋದು ದೊಡ್ಡ ಪ್ರಶ್ನೆ! ಕಾಲಗಳು ವ್ಯತಿರಿಕ್ತವಾಗತೊಡಗಿವೆಯೆಂದೂ ಹೇಳುತ್ತಾರೆ. ಯಾವ್ಯಾವ ಕಾಲದಲ್ಲಿ ಮಳೆ ಬರುತ್ತದೆ? ಎಂಬುದೇ ಈಗ ಸಂದೇಹವಾಗಿದೆ. ಈಗಂತೂ ತಿಂಗಳಿಗೊಮ್ಮೆ ವಾಯುಭಾರ ಕುಸಿತವೆಂಬ ಕಾರಣಕ್ಕೆ ಅಕಾಲಿಕವಾಗಿ ಮಳೆ ಬರುವುದುಂಟು.

ಆದರೆ ಕಾಯುವಾತನಿಗೆ ಎಲ್ಲರೂ ನಿರ್ಮಲ ಭಾವದಿಂದ ಶರಣಾದರೆ ಆತನಿಗೆ ಕರುಣೆ ಬಂದೀತು. ಬಂದಂತಹ ಕಷ್ಟಕೋಟಲೆಗಳು ಹೇಳಹೆಸರಿಲ್ಲದೇ ಮಾಯವಾದಾವು. ಆದರೆ ಯಾರಲ್ಲೂ ಕೇಳಿದರೂ ಅದರದೇ ನಾಮಸ್ಮರಣೆಯಾಗಿದೆ. ಮೊದಲೆಲ್ಲ ಹೇಗಿದ್ದೀರಾ, ಎಲ್ಲರೂ ಸೌಖ್ಯ ತಾನೇ ಎಂದು. ತೋಟದಲ್ಲಿ ಫಸಲು ಹೇಗಿದೆ? ಗದ್ದೆಯಲ್ಲಿ ಬೆಳೆ ಹೇಗಿದೆ? ಎಂದು ಕೇಳುತ್ತಿದ್ದ ಮಂದಿ ಬಹಳ. ಆದರೆ ಈಗ ಕಾಲ ಬದಲಾಗಿದೆಯೇ? ಇಲ್ಲ! ಆದರೂ ಕೇಳುತ್ತಾರೆ ಯಾರು ಸಿಕ್ಕಿದ್ರೂ ಫೋನ್ ಮಾಡಿದ್ರೂ ಅದೇ ಸುದ್ದಿ. ಯಾಕಾಗಿ? ಎಲ್ಲರೂ ಜಪಿಸುತ್ತಿರುವುದರಿಂದಲೇ ಇಷ್ಟೆಲ್ಲಾ ರಾದ್ಧಾಂತವೋ ಏನೋ? ಸುದ್ದಿ ಮಾಡ್ಬೇಡಿ. ಸುದ್ದಿಯೇ ಇರದೇ ಹೋಗ್ಲಿಬಿಡಿ. ಮನದೊಳಗೆ ಖುಷಿಯಾಗಿರುವುದಕ್ಕೆ ಮೊದಲಾಗಿ ಕಲಿಯಿರಿ.

- Advertisement -
- Advertisement -

MOST POPULAR

HOT NEWS

Related news

error: Content is protected !!