Thursday, April 25, 2024
spot_imgspot_img
spot_imgspot_img

ಸೋಲು ಗೆಲುವಿಗೆ ದಾರಿ

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ

ನದ ಭಾವನೆಗಳಿಗೆ ಬೇಲಿಯೆಂಬುದೇ ಇಲ್ಲ. ಎಲ್ಲಿ ಬೇಕಾದರೂ ಸಂಚಾರ ಮಾಡತಕ್ಕ ಸೌಭಾಗ್ಯ ಮನಸ್ಸಿಗಿದೆ. ಹೇಗೆ ಬೇಕೋ ಹಾಗೆ ಹೊಂದಾಣಿಕೆ ಮಾಡಿಕೊಂಡು ಬರುವ ಶಕ್ತಿಯೂ ಇದೆ. ಮನಸ್ಸಿನಿಂದಲೇ ವೈರಿಗಳು ಸೃಷ್ಟಿಯಾಗುತ್ತಾರೆ. ಅದೇ ರೀತಿ ಗೆಳೆತನವೂ ಪ್ರಾಪ್ತಿಯಾಗುತ್ತದೆ. ಮಕ್ಕಳಂತೆ ಕುಣಿದು ಕುಪ್ಪಳಿಸುವ ಮನಸ್ಸಿದ್ದರಂತೂ ಯಾವಾಗಲೂ ಲವಲವಿಕೆಯಿಂದಾನೇ ಕೂಡಿರಲು ಸಾಧ್ಯವಿದೆ.


ರಚ್ಚೆ ಹಿಡಿದು ಅಳುವ ಮಗುವನ್ನು ತಾಯಿ ಎಷ್ಟೇ ಕಷ್ಟವಾದರೂ ಮುದ್ದುಗರೆಯುತ್ತಾ ಲಲ್ಲೆಮಾಡಿ ಮನವೊಲಿಸಿ ನಗಿಸುವಂತೆ ಮಾಡುತ್ತಾಳೆ ಅಥವಾ ಸುಮ್ಮನಾಗುವಂತೆ ಪ್ರಯತ್ನಿಸುತ್ತಾಳೆ. ಅದೇ ರೀತಿ ಹಠಮಾರಿಯಾದ ಮನಸ್ಸನ್ನು ಕಷ್ಟದಿಂದ ಇಷ್ಟದೆಡೆಗೆ ಒಳಿತಾಗುವಂತಹ ಕಾರ್ಯಗಳನ್ನು ಮಾಡಿಸುವತ್ತ ಪ್ರೇರೇಪಿಸಬೇಕು.

ಲಂಗು ಲಗಾಮಿಲ್ಲದ ಕುದುರೆಯನ್ನು ಯಾರೂ ಹತ್ತಿ ಪಯಣಿಸಲಾರರು. ಅದಕ್ಕೆ ಸರಿಯಾದ ತರಬೇತಿ ಇದ್ದರೇನೇ ದಾರಿ ಕ್ರಮಿಸಲು ಸಾಧ್ಯವಾಗುವುದು. ಮನಸ್ಸೆಂಬ ಕುದುರೆಗೂ ಒಳ್ಳೆಯ ತರಬೇತಿ ಸಿಕ್ಕರೆ ತನ್ನಿಂತಾನೇ ಅತ್ಯದ್ಭುತ ಸಾಧನೆಯ ಮಾರ್ಗವೇ ದೊರಕಬಲ್ಲುದು. ಅಥವಾ ಸರಿಯಾದ ತರಬೇತಿ ಪಡೆದುಕೊಳ್ಳಲು ಮನವನ್ನು ಸಜ್ಜುಗೊಳಿಸಬೇಕು.ಆಗಲೇ ಸುಜ್ಞಾನವೆಂಬ ಕೀಲಿಕೈ ದೊರೆಯಲು ಸಾಧ್ಯವಾಗುವುದು.

ಹೇಗೋ ಏನೋ ಬದುಕು ನಡೆಸುವುದು ಕಷ್ಟವೇ ಅಲ್ಲ. ಸರಿಯಾದ ರೀತಿಯಲ್ಲಿ ಕ್ರಮ ಪ್ರಕಾರವಾಗಿ ಬದುಕು ನಡೆಸಲು ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ. ಮನದೊಳಗೆ ಅಸಮಾಧಾನ ಉಂಟಾದಾಗ ಭಗ್ಗನೇ ಕೋಪವು ಆವರಿಸುತ್ತದೆ. ಅದು ಸುಲಭ ಹಾಗೂ ಪ್ರಯತ್ನ ಪಡದೇ ಬರುವಂತಹದ್ದು ಕೂಡ ಆಗಿದೆ. ಆದರೆ ಅದೇ ಕೋಪವನ್ನು ಶಮನಗೊಳಿಸಲು ತುಂಬಾ ಪ್ರಯಾಸಪಡಬೇಕಾಗುತ್ತದೆ ಅಥವಾ ಒಮ್ಮೊಮ್ಮೆ ಕಷ್ಟವೇ ಆಗಲೂಬಹುದು. ಅದಕ್ಕೆ ಮನಸ್ಸನ್ನು ತಹಬಂಧಿಗೆ ತರುವ ಕಲಿಕೆ ದಿನಾಲೂ ಅತ್ಯಗತ್ಯ ಆಗಬೇಕು.

ಗಾಡಿಚಾಲಕ ಗಾಡಿಯನ್ನು ಅತ್ಯಂತ ವೇಗವಾಗಿ ನಡೆಸಲು ಹೆಚ್ಚು ಪ್ರಯತ್ನಿಸಬೇಕಾಗಿಲ್ಲ. ಅಕ್ಸಿಲೇಟರ್ ಒತ್ತಿದರೆ ತನ್ನಿಂತಾನೇ ವೇಗ ಪಡೆದುಕೊಳ್ಳುತ್ತದೆ. ಆದರೆ ಅದೇ ವೇಗವನ್ನು ಹಠಾತ್ತನೆ ನಿಯಂತ್ರಣಕ್ಕೆ ತರಲು ಕೊಂಚ ಪ್ರಯತ್ನ ಪಡಲೇಬೇಕಾಗುತ್ತದೆ. ಇಲ್ಲವಾದಲ್ಲಿ ಏನೇನೋ ನಡೆದುಹೋಗುವ ಸಂಭವ ಅಧಿಕವಾಗಿರುತ್ತದೆ. ಹಾಗಾಗಿ ಕಲಿಯುವಿಕೆಯೆಂಬುದು ನಿಧಾನವಾಗಿ ಒಂದೊಂದೇ ಮೆಟ್ಟಿಲು ಹತ್ತುವ ಹಾಗೆ, ಕಲಿತ ನಂತರವೂ ಅದೇ ಅನುಭವದಿಂದ ಸೀಮಿತವಾಗಿ ಹಾಗೂ ಸಮರ್ಪಕವಾಗಿ ಬಳಸುವುದೊಳಿತು. ಪ್ರಯತ್ನ ಪಡದೇ ಅನಾಯಾಸವಾಗಿ ದೊರಕುವ ಸಫಲತೆಯಲ್ಲೂ ಎಚ್ಚರಿಕೆ ಮನದೊಳಗಿರಬೇಕು. ಇಲ್ಲವಾದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಹಾದಿಗಳು ಅಥವಾ ಘಟನೆಗಳು ಗಮ್ಯ ಸೇರುವಲ್ಲಿ ತೊಡಕಾಗಿ ನಿಲ್ಲಬಹುದು. ಅದಕ್ಕಾಗಿ ಸಾವಕಾಶದಿಂದ ಸಾಗುವುದು ಒಳಿತು.

ಮನಸ್ಸು ವಾಯುವೇಗದಲ್ಲಿ ಸಂಚರಿಸುತ್ತದೆ. ದೇಹ ಇದ್ದಲ್ಲೇ ಇರುತ್ತದೆ. ಬೆಳಗಿನ ಜಾವದ ಸಮಯದಲ್ಲೂ, ಮಧ್ಯಾಹ್ನದ ಸಮಯದಲ್ಲೂ ಭೌತಿಕ ದೇಹ ಒಂದೇ ಕಡೆ ಇದ್ದರೂ ಮನಸ್ಸಿನ ಭಾವನೆ ಬೇರೆ ಬೇರೆಯಾಗಿರಬಹುದು. ಬೆಳಗಿನ ಹಿತ ವಾತಾವರಣ ಮಧ್ಯಾಹ್ನಕ್ಕೆ ಖಂಡಿತ ಇರದು.ಇದ್ರೂ ಚಡಪಡಿಸುವುದು. ಹಾಗಾಗಿ ಮನಸ್ಸಿಗೆ ದೇಹವೊಂದೇ ಪ್ರೇರಣೆಯಲ್ಲ. ವ್ಯಕ್ತಿ, ಪರಿಸರ, ಸಮಯಗಳು ಕೂಡಾ ನೆಪವಾಗಿರುತ್ತವೆ. ಬೆಳ್ಳಂಬೆಳಿಗ್ಗೆ ಹೊರಟಾಗಿನ ಪ್ರಯಾಣ ಮನಸ್ಸಿಗೆ ಹಿತ ನೀಡುತ್ತದೆ. ಆದರೆ ಹೊತ್ತು ಮೀರಿ ಹೊರಟ ಪ್ರಯಾಣವು ಮನಸ್ಸಿಗೆ ಒತ್ತಡ ಹೆಚ್ಚಿಸುತ್ತದೆ. ಕಾಲಾವಕಾಶ ಕಡಿಮೆಯಾದಂತೆ ಒತ್ತಡವು ಇನ್ನೂ ಜಾಸ್ತಿಯಾಗುತ್ತದೆ. ಹಾಗಾಗಿ ಅಂದಂದಿನ ಕಾರ್ಯಗಳನ್ನು ಅಂದಂದೇ ನೆರವೇರಿಸುವುದು ಸೂಕ್ತ.

ಆದರೆ ಕೆಲವೊಮ್ಮೆ ಕಾರ್ಯಗಳನ್ನು ಮುಂದೂಡಲ್ಪಟ್ಡು, ಜೀವನದ ಗತಿಯೇ ಆಶ್ಚರ್ಯಕರವಾದ ರೀತಿಯಲ್ಲಿ ಬದಲಾಗುವುದೂ ಇದೆ. ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿ ಅಥವಾ ತಡವಾಗಿ ಹೋಗಿ ಅಗತ್ಯದ ಪ್ರಯಾಣವು ರದ್ದಾಗಿ ಹೋದರೆ ಅನಾರೋಗ್ಯಕ್ಕೆ ಅಥವಾ ತಡವಾಗಿ ಹೋದುದರ ಬಗ್ಗೆ ಶಾಪ ಹಾಕಿಕೊಳ್ಳುವವರು ಅನೇಕ. ಆದರೆ ಹೊರಟುಹೋದ ವಿಮಾನ, ರೈಲು ಅಥವಾ ಸಾರಿಗೆ ಯಾವುದೇ ಅಗಿರಲಿ ಅಪಘಾತಕ್ಕೊಳಪಟ್ಟು ಅದರಲ್ಲಿದ್ದ ಎಲ್ಲರೂ ಅಂತಿಮ ಪ್ರಯಾಣ ಸಾಗಿಸಿದ್ದಾರೆಂದರಿತಾಕ್ಷಣ ಅನಾರೋಗ್ಯವನ್ನೋ ಅಥವಾ ತಡವಾಗಿ ಹೋದದ್ದಕ್ಕೋ ಹೊಗಳಿಕೊಂಡವರು ಇಲ್ಲದಿಲ್ಲ. ಬದುಕೆಂಬುದು ಹಾವು ಏಣಿಯಾಟ. ಬಂದಂತೆ ಬಳಸಿಕೊಳ್ಳುವುದರಲ್ಲಿದೆ ಜಾಣ್ಮೆ.

ಕೆಲವರು ಅತಿಯಾದ ತಿಂಡಿ ಪ್ರಿಯರಾಗಿರುತ್ತಾರೆ. ಅದು ಸಹಜ ತಾನೆ ಅದರಲ್ಲಿ ಏನು ಅಂತಹ ಉತ್ಪ್ರೇಕ್ಷೆ ಎಂದು ಹುಬ್ಬೇರಿಸುವವರು ಇರಬಹುದು. ಏನೇ ತಿಂಡಿ ತೀರ್ಥ ಇರಲಿ ಆದ್ರೆ ಹೊಟ್ಟೆ ಚುರ್ ಅನ್ನುವಾಗ ಮಧ್ಯಾಹ್ನದ ಹೊತ್ತಾದರೆ ಗಂಜಿ, ಚಟ್ನಿಯೇ ಮೃಷ್ಟಾನ್ನವೆನಿಸುವುದು. ಅದು ಬಿಟ್ಟು ಕುರುಕಲು ತಿಂಡಿಯೋ ಅಥವಾ ಬಾಟಲಿ ಪಾನೀಯವೋ ಆದರೆ ಹೊಟ್ಟೆಯನ್ನು ಒಮ್ಮೆ ತೃಪ್ತಿ ಪಡಿಸಬಹುದು. ಆದರೆ ಒಳಗಿಂದೊಳಗೇ ಅವ್ಯಕ್ತವಾದ ಹೇಳಲಸಾಧ್ಯವಾದ ತಳಮಳವೂ ಆಗಬಹುದು. ಹಾಗಾಗಿಯೇ ಉದರವನ್ನು ಹಿತ ಮಿತವಾದ ರೀತಿಯಲ್ಲಿ ತಣಿಸಬೇಕು. ಹೊರಗಿನ ಅಷ್ಟೈಶ್ವರ್ಯಗಳಂತಹ ಅದೇನೇ ಸ್ವಾದಿಷ್ಟ ಭೋಜನವಾದರೂ ಅದು ನಾಲಿಗೆಗೆ ಮಾತ್ರಾ ರುಚಿಸುವುದು. ಹೊಟ್ಟೆಗೇನೂ ಗೊತ್ತಾಗದು. ನಾಲಿಗೆಗೆ ರುಚಿಯಾದದ್ದು ಹೊಟ್ಟೆಯನ್ನು ಕೆಡಿಸಿಯೂ ಬಿಡಬಹುದು. ಹಾಗಾಗಿ ಸಾದಾ ಸೀದಾ ಸರಳ ಆಹಾರವು ಕೂಡಾ ನಮ್ಮ ಮನಸ್ಸನ್ನು ಹದವಾಗಿರಿಸಬಲ್ಲುದು.

ಪಂಚೇಂದ್ರಿಯಗಳನ್ನು ಬೇಕಾಬಿಟ್ಟಿ ಬೆಳೆಸಿದರೆ ಕಡೆಗೆ ಅವು ಹೇಳಿದ ಹಾಗೆ ಕುಣಿಯಬೇಕಾಗುತ್ತದೆ. ಆಗ ಬದುಕು ಪರಾಧೀನವಾಗುವ ಸಂದರ್ಭವೇ ಹೆಚ್ಚು. ಮನಸ್ಸನ್ನು ಕಡಿವಾಣ ಹಾಕಿ ಕಾಯ್ದುಕೊಂಡರೆ ಜಗತ್ತಿನ ತುಂಬಾ ಯಾವ ಅನ್ಯಾಯ, ಅತ್ಯಾಚಾರ,ಕೊಲೆ, ಸುಲಿಗೆ, ಕಳ್ಳತನಗಳೇ ಮುಂತಾದ ಕೆಟ್ಟಕಾರ್ಯಗಳು ಹೇಳ ಹೆಸರಿಲ್ಲದೇ ಅಂತ್ಯವಾಗಬಹುದು. ಮನುಷ್ಯತ್ವದ ಎಲ್ಲೆ ಮೀರದೇ ಬದುಕಿದರೆ ಈ ಜೀವನ ಬೆಳದಿಂಗಳಿನಂತೆ ಸಾರ್ಥಕವಾದೀತು. ಜೀವನದಲ್ಲಿ ಸೋಲು ಗೆಲುವೆಂಬುದು ಇದ್ದೇ ಇರುತ್ತದೆ. ಸೋತಾಗ ಅಂಜದೇ ಅಳುಕದೇ ಆ ದೇವರಿಗೆ ಶರಣಾಗಿ. ಆಗ ಆತ್ಮವಿಶ್ವಾಸದ ಬೆಳಕು ಗೋಚರಿಸುತ್ತದೆ. ಅದು ಅಂತಿಂಥ ಬೆಳಕಲ್ಲ. ಮನಸ್ಸಲ್ಲೇ ಗುನುಗುನಿಸಿ . ಹೊರಗಿನ ಸ್ಥಿತಿಯ ಬಗ್ಗೆ ಆಲೋಚಿಸದೇ ಅಂತರ್ಮುಖಿಯಾಗಿರಿ. ಆಗ ನೀವೇ ನೋಡುವಿರಿ. ಬೆಳದಿಂಗಳಿನಂತೆ ಹಣತೆಯ ರೂಪ ಮನದೊಳಗೆ ಪ್ರತಿರೂಪವಾಗಿ ಕಾಣುತ್ತದೆ. ಕಣ್ಣು ಬಿಟ್ಟಾಗ ಆಗ ತಾನೇ ನಿದ್ದೆಯಿಂದೆದ್ದ ಅನುಭವ. ಗೆಲುವಿನ ದಾರಿ ಹೀಗೇ……

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು
[email protected]

- Advertisement -

Related news

error: Content is protected !!