

ಮಂಗಳೂರು: ಹೆಣ್ಣಿನಾಸೆಗೆ ಬಿದ್ದ ಕೇರಳ ಮೂಲದ ಉದ್ಯಮಿಗಳಿಬ್ಬರು ಹನಿಟ್ರ್ಯಾಪ್ಗೆ ಒಳಗಾಗಿ ಲಕ್ಷಾಂತರ ರೂ ಕಳೆದುಕೊಂಡಿದ್ದು, ಯುವತಿ ಸೇರಿ ಎಂಟು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಮೊಯ್ದಿನ್ ಕುಂಞ(45) ಮತ್ತು ಮೊಹಮ್ಮದ್ ರುಕ್ಸಾದ್ ಹನಿಟ್ರ್ಯಾಪ್ ಒಳಗಾದ ವ್ಯಕ್ತಿಗಳು
ಬೇರೆಯವರ ಮೂಲಕ ಸಂಪರ್ಕಕ್ಕೆ ಬಂದ ಯುವತಿಯ ಜೊತೆ ಮೊಯ್ದಿನ್ ಕುಂಞ ಮತ್ತು ಮೊಹಮ್ಮದ್ ಕಳೆದ ಫೆಬ್ರವರಿ ತಿಂಗಳ 16ರಂದು ವಾಮಂಜೂರು ಬಳಿಯ ಮೂಡುಶೆಡ್ಡೆಯ ರೆಸಾರ್ಟಿಗೆ ತೆರಳಿದ್ದರು. ರಾತ್ರಿ ವೇಳೆ ತಂಡವೊಂದು ಕೊಠಡಿಗೆ ಎಂಟ್ರಿ ಕೊಟ್ಟಿದ್ದು, ಫೋಟೋ, ವಿಡಿಯೋ ಮಾಡಿದ್ದರು. ಮೊಯ್ದಿನ್ ಕುಂಞಗೆ ಹಲ್ಲೆಗೈದು ಹಣಕ್ಕಾಗಿ ಪೀಡಿಸಿದ್ದರು. ಹಣ ಕೊಟ್ಟರೆ ಮಾತ್ರ ಬಿಡ್ತೀವಿ, ಇಲ್ಲದಿದ್ದಾರೆ ವಿಡಿಯೋವನ್ನು ಜಾಲತಾಣದಲ್ಲಿ ಹಾಕುತ್ತೇವೆಂದು ಬ್ಲಾಕೇಲ್ ಮಾಡಿದ್ದರು. ಬೆದರಿದ ಮೊಯ್ದಿನ್ ಕುಂಞ ಹಣ ಕೊಟ್ಟು ಅಲ್ಲಿಂದ ಪಾರಾಗಿ ಬಂದಿದ್ದರು.
ಆದರೆ ಯುವಕರ ತಂಡ ಸುಮ್ಮನಾಗದೇ ಪದೇ ಪದೇ ಕರೆ ಮಾಡಿ, ಹಣಕ್ಕಾಗಿ ಪೀಡಿಸಿದ್ದಾರೆ. ಗೂಗಲ್ ಪೇ, ಬ್ಯಾಂಕ್ ಅಕೌಂಟ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಮೂರು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ಕಳಕೊಂಡ ಮೊಯ್ದಿನ್ ಕುಂಞ ಇತ್ತೀಚೆಗೆ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪ್ರೀತಮ್ ಬೊಂದೇಲ್, ಮೂಡುಶೆಡ್ಡೆ ಆಸುಪಾಸಿನ ಕಿಶೋರ್, ಮುರಳಿ, ಸುಶಾಂತ್, ಅಭಿ ಸೇರಿ ಮೂಡುಬಿದ್ರೆ ಮೂಲದ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ.
ಯುವತಿಗೂ ಬ್ಲಾಕೇಲ್ ಮಾಡಿದ ಯುವಕರಿಗೂ ಕನೆಕ್ಷನ್ ಇದೆಯೆನ್ನುವ ಮಾಹಿತಿಯಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿ ಇದೇ ರೀತಿಯ ಹಿನ್ನೆಲೆ ಹೊಂದಿದ್ದು, ಯುವಕರನ್ನು ಬಲೆಗೆ ಕೆಡವಿ ಹಣ ಮಾಡಿಕೊಳ್ಳುತ್ತಿದ್ದಳು. ಪ್ರೀತಮ್ ಅಲಿಯಾಸ್ ಸುರೇಂದ್ರ ಬೋಂದೆಲ್ ನಿವಾಸಿಯಾಗಿದ್ದು, 420 ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾನೆ. ಸೆಕ್ಯುರಿಟಿ ಗಾರ್ಡ್ ಒಬ್ಬನಿಗೆ ಹಲ್ಲೆಗೈದ ಬಗ್ಗೆ ಬರ್ಕೆ ಠಾಣೆಯಲ್ಲಿ ಕೇಸು ದಾಖಲಾಗಿತ್ತು