


ಮಂಗಳೂರು: ಯುವತಿಯೊಬ್ಬಳು ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದು ಕದ್ರಿ ಪೊಲೀಸರು ಠಾಣೆಯಲ್ಲಿ ಹಿಡಿದಿಡಲು ಹರಸಾಹಸ ಪಟ್ಟ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು, ಯುವತಿ ಯಾವುದೇ ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ಫಲಿತಾಂಶ ಬಂದಿಲ್ಲ, ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದೆ.
ಸೆ.1 ರಂದು ಬೆಳಗ್ಗೆ 6.45 ಕ್ಕೆ ಪಂಪ್ವೆಲ್‌ನಲ್ಲಿ ಮೆಡಿಕಲ್ ಒಂದಕ್ಕೆ ಬಂದಿದ್ದ ಯುವತಿಯೋರ್ವಳು ಎಲ್ಲರ ಮೇಲೆ ಆಕ್ರಮಣಕಾರಿಯಾಗಿ ವರ್ತನೆ ಮಾಡುತ್ತಿದ್ದು, ಇದನ್ನು ಕಂಡ ರೌಂಡ್ಸ್ ಅಬಕಾರಿ ಇಲಾಖೆಯವರು ಆಕೆಯನ್ನು ಹಿಡಿದು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನ ಪಟ್ಟಾಗ ಆಕೆ ದಾಳಿ ಮಾಡಲು ಮುಂದಾಗಿದ್ದಾಳೆ. ಕೊನೆಗೆ ಬೇಸತ್ತು ಯುವತಿಯನ್ನು ಕದ್ರಿ ಠಾಣೆಗೆ ತಂದಿದ್ದಾರೆ. ಆದರೆ ಯುವತಿಯನ್ನು ಅಲ್ಲಿಯೂ ಹಿಡಿದಿಡಲು ಮಹಿಳಾ ಸಿಬಂದಿ ಹರಸಾಹಸ ಪಟ್ಟಿದ್ದಾರೆ.
ಯುವತಿ ಮಹಿಳಾ ಪೊಲೀಸರಿಗೆ ತನ್ನ ಕಾಲಿನಿಂದ ಒದೆಯುವ ದೃಶ್ಯಗಳು ವೀಡಿಯೋದಲ್ಲಿ ಕಂಡು ಬಂದಿದೆ. ನಂತರ ಯುವತಿಯ ಕಾಲಿಗೆ ಕೋಳ ತೊಡಿಸಿ ಕೈ ಕಾಲು ಕಟ್ಟಿ ಆಸ್ಪತ್ರೆಗೆ ಒಯ್ದಿದ್ದು ತಪಾಸಣೆ ಮಾಡಲಾಗಿದೆ. ಡ್ರಗ್ಸ್ ವ್ಯಸನದಿಂದ ಆಕೆ ಈ ರೀತಿ ವರ್ತಿಸುತ್ತಿದ್ದಾಳೆಂಬ ಸಂಶಯದಿಂದ ಚೆಕ್ ಮಾಡಿದಾಗ, ನೆಗೆಟಿವ್ ಬಂದಿದೆ. ಪೋಷಕರ ಬಗ್ಗೆ ಕೇಳಿದಾಗಲೂ ಮಾಹಿತಿ ನೀಡುತ್ತಿರಲಿಲ್ಲ.
ಒಮ್ಮೆ ಹಿಂದಿ, ಇನ್ನೊಮ್ಮೆ ಇಂಗ್ಲಿಷ್ ಮಾತಾಡುತ್ತಿದ್ದಳು. ಮಾನಸಿಕ ತಜ್ಞರಲ್ಲಿ ತೋರಿಸಬೇಕೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಕಡೆಗೆ ಪೊಲೀಸರು ಒಯ್ಯುತ್ತಿದ್ದಾಗ, ಆಕೆ ತನ್ನ ಮನೆ ಇಲ್ಲೇ ಇದೆಯೆಂದು ಹೇಳಿದ್ದಾಳೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ, ಮತ್ತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಆಕೆಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು ಹಾಗಾಗಿ ಮನೆಯಲ್ಲೇ ಇಟ್ಟು ಚಿಕಿತ್ಸೆ ನೀಡುತ್ತಿದ್ದರಂತೆ.