


ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಕ್ಕೆ ಸುಬ್ರಹ್ಮಣ್ಯ ರೋಡ್ ನಡುವೆ ಪ್ಯಾಸೆಂಜರ್ ರೈಲು ಸಂಚಾರ ಏಪ್ರಿಲ್ 12ರಿಂದ ಪ್ರಾರಂಭವಾಗಲಿದೆ. ದಿನಕ್ಕೆ 4 ಬಾರಿ ಸಂಚರಿಸಲಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ತಿಳಿಸಿದರು.
ಏ.12ರಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ.
ಈ ಹಿಂದೆ ಕಬಕ ಪುತ್ತೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆಗೆ ವಿಸ್ತರಿಸುವುದು ಬಹಳ ಹಿಂದಿನ ಬೇಡಿಕೆಯಾಗಿತ್ತು. ಈ ರೈಲು ನಿತ್ಯ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಹೋಗುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಜೊತೆಗೆ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವವರಿಗೆ ಪ್ರಯೋಜನವಾಗಲಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರೈಲು ವಿಸ್ತರಣೆ ಕುರಿತು ಮಾಹಿತಿ ನೀಡಿದ್ದಾರೆ.
ರೈಲಿನ ವೇಳಾಪಟ್ಟಿ ಹೀಗಿದೆ:
ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು (56625) ಮುಂಜಾನೆ 4ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಕಬಕ-ಪುತ್ತೂರಿಗೆ 5.18ಕ್ಕೆ ತಲುಪಲಿದೆ. ಇಲ್ಲಿ 2 ನಿಮಿಷ ನಿಲುಗಡೆಯಾಗಿ 6.30ಕ್ಕೆ ಸುಬ್ರಹ್ಮಣ್ಯ ತಲುಪಲಿದೆ.
ಸುಬ್ರಹ್ಮಣ್ಯ-ಮಂಗಳೂರು (56626) ಪ್ಯಾಸೆಂಜರ್ ರೈಲು ಬೆಳಗ್ಗೆ 7ಕ್ಕೆ ಸುಬ್ರಹ್ಮಣ್ಯದಿಂದ ಹೊರಟು 7.48ಕ್ಕೆ ಕಬಕ-ಪುತ್ತೂರು ತಲುಪಲಿದೆ. 2 ನಿಮಿಷ ನಿಲುಗಡೆಯಾಗಿ 9.30ಕ್ಕೆ ಮಂಗಳೂರು ಸೆಂಟ್ರಲ್ಗೆ ತಲುಪಲಿದೆ.
ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು (56627) ಸಂಜೆ 5.45ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಸಂಜೆ 7.03ಕ್ಕೆ ಪುತ್ತೂರಿಗೆ ತಲುಪಲಿದೆ. 2 ನಿಮಿಷ ನಿಲುಗಡೆಯಾಗಿ ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ತಲುಪಲಿದೆ.
ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಪ್ಯಾಸೆಂಜರ್ ರೈಲು (56628) ರಾತ್ರಿ 8.40ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಹೊರಟು ರಾತ್ರಿ 9.28ಕ್ಕೆ ಕಬಕ-ಪುತ್ತೂರಿಗೆ ತಲುಪಿ 2 ನಿಮಿಷ ನಿಲುಗಡೆಯಾಗಿ ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.