Thursday, June 18, 2026
spot_imgspot_img
spot_imgspot_img

ಮಂಗಳೂರು: ಹೆಬ್ಬಾವು ಮಾರಾಟ ಜಾಲ ಪತ್ತೆ; ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳ ಬಂಧನ..!

- Advertisement -
- Advertisement -

ಮಂಗಳೂರು: ಹೆಬ್ಬಾವು ಮಾರಾಟ ಜಾಲವೊಂದನ್ನು ಪತ್ತೆ ಹಚ್ಚಿರುವ ಮಂಗಳೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಅಪ್ರಾಪ್ತ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಸ್ಟೇಟ್ ಬ್ಯಾಂಕ್ ಬಳಿಯ ಸಾಕುಪ್ರಾಣಿ ಅಂಗಡಿ ಮಾಲಕ ಇಬ್ರಾಹೀಂ ಶಕೀಲ್ ಇಸ್ಮಾಯಿಲ್ (35), ಅಂಗಡಿ ಸಿಬಂದಿ ಮಹಮ್ಮದ್ ಮುಸ್ತಫಾ (22) ಮತ್ತು ಮಂಗಳೂರಿನ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ 16 ವರ್ಷದ ಬಾಲಕ ಎಂದು ಗುರುತಿಸಲಾಗಿದೆ.

ಹೆಬ್ಬಾವು ಮಾರಾಟ ಜಾಲದ ಮಾಹಿತಿ ತಿಳಿದ ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾಯಾಚರಣೆ ನಡೆಸಿದ್ದಾರೆ.

ಮೊದಲಿಗೆ ಇಬ್ಬರು ಹೆಬ್ಬಾವು ಖರೀದಿಸುವ ನೆಪದಲ್ಲಿ ಆರೋಪಿ ವಿಹಾಲ್‌ನನ್ನು ಸಂಪರ್ಕಿಸಿದ್ದಾರೆ. ನಗರದ ಕದ್ರಿಯ ಅಪ್ಪಚ್ಚ ಕಟ್ಟೆಯ ಬಳಿ ಈ ಬಗ್ಗೆ ಆತನೊಂದಿಗೆ ಮಾತುಕತೆ ನಡೆಸಿದ್ದಾರೆ. ಆತ ಹಾವು ತೋರಿಸಿ 45 ಸಾವಿರಕ್ಕೆ ರೇಟ್ ಫಿಕ್ಸ್ ಮಾಡಿದ್ದಾನೆ. ಈ ವೇಳೆ ಆತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರಿಂದ ಭಯಭೀತನಾದ ಆತ ಹಾವು ನನ್ನದಲ್ಲ ಎಂದು ಅಪ್ರಾಪ್ತ ವಯಸ್ಸಿನ ಬಾಲಕ ಅದನ್ನು ಮಾರಲೆಂದು ನೀಡಿದ್ದಾನೆ ಎಂದಿದ್ದಾನೆ. ಮುಂದಿನ ಹಂತವಾಗಿ ಆತನ ಮೂಲಕವೇ ಬಾಲಕನಿಗೆ ಕರೆ ಮಾಡಿಸಿ ಮಾಲ್ ವೊಂದರ ಬಳಿ ಆತನನ್ನು ಬಂಧಿಸಿದ್ದಾರೆ.

ಸ್ಟೇಟ್ ಬ್ಯಾಂಕ್‌ನಲ್ಲಿರುವ ಸಾಕು ಪ್ರಾಣಿ ಮಾರಾಟ ಅಂಗಡಿಯಲ್ಲೂ ಹಾವು ಮಾರಾಟ ನಡೆಯುತ್ತಿದೆ ಎಂದು ಮಾಹಿತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಹಕರ ಸೋಗಿನಲ್ಲಿ ಓರ್ವ ಯುವಕನನ್ನು ಅಲ್ಲಿಗೆ ಕಳುಹಿಸಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ ತಮ್ಮಲ್ಲಿ ಹಾವಿದೆ ತರಿಸಿ ಕೊಡುತ್ತೇವೆ ಎಂದು ವಿಹಾಲ್‌ಗೆ ಕರೆ ಮಾಡಿದ್ದಾರೆ. ತಕ್ಷಣ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮಾಲೀಕ ಹಾಗೂ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಅಂಗಡಿಯಲ್ಲಿ ನಕ್ಷತ್ರ ಆಮೆಗಳೂ ಸಿಕ್ಕಿದ್ದು, ಅವುಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!