




ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ಭೀಕರ ದಾಳಿಯನ್ನು ಖಂಡಿಸಿ ಮತ್ತು ಹುತಾತ್ಮರಾದವರಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಶುಕ್ರವಾರ ಮೊಂಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸಲಾಯಿತು.ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಅಮಾಯಕರ ಮೇಲೆ ಭಯೋತ್ಪಾದಕರು ಅತ್ಯಂತ ಅಮಾನುಷವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವುದು ಖಂಡನೀಯ. ಇಂತಹ ಕೃತ್ಯದಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟಾಗಿದೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು. ಮೃತರ ಆತ್ಮಕ್ಕೆ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನುಡಿನಮನ ಸಲ್ಲಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಭಾರತದ ಏಕತೆಯನ್ನು ಸಹಿಸದ ಪಾಕಿಸ್ತಾನ ಕಾಶ್ಮೀರದ ಪ್ರವಾಸಿಗರ ಮೇಲೆ ಘನಗೋರ ಕೃತ್ಯ ಎಸಗಿದೆ. ಭಯೋತ್ಪಾದನೆಗೆ ಜಾತಿ-ಧರ್ಮವಿಲ್ಲ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ನಿಲ್ಲಬೇಕು ಮತ್ತು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಭಯೋತ್ಪಾದಕರ ಹೇಯ ಕೃತ್ಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು.