ವಯನಾಡ್: ಕೇರಳದ ವಯನಾಡು ಪ್ರಕೃತಿ ವಿಕೋಪದಿಂದ ದುರಂತ ಭೂಮಿಯಾಗಿ ಮಾರ್ಪಾಡಾಗಿದ್ದು, ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಹಲವು ಕುಟುಂಬಗಳು ಜಲಸಮಾಧಿಯಾಗಿವೆ. ಕನಿಷ್ಠ 400ಕ್ಕೂ ಹೆಚ್ಚು ಕುಟುಂಬಗಳು ದುರಂತದಲ್ಲಿ ಸಿಲುಕಿವೆ ಎಂದು ಅಂದಾಜಿಸಲಾಗಿದ್ದು, ಅನೇಕರು ನಿರ್ಗತಿಕರಾಗಿರುವ ಸಾಧ್ಯತೆ ಇದೆ.
ಇಂದು ನಸುಕಿನ ಜಾವ ಭೂಕುಸಿತ ಸಂಭವಿಸಿದ್ದು, ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿದ್ದು ಅನೇಕ ಊರುಗಳ ಚಿತ್ರಣವೇ ಬದಲಾಗಿವೆ.
ಭೂಕುಸಿತ ಪ್ರದೇಶಗಳಲ್ಲಿ ವಿಪತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ, ಕಂದಾಯ ಮತ್ತು ಸ್ಥಳೀಯ ಸ್ವ-ಸರ್ಕಾರ ಇಲಾಖೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ ಡಿ ಆರ್ ಹೇಳಿದ್ದಾರೆ.
ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ ವಯನಾಡಿಗೆ ಆಗಮಿಸಿದ್ದ ಎರಡು ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದ ಕಾರ್ಯಾಚರಣೆ ಸಾಧ್ಯವಾಗದೇ ಹಿಂದಿರುಗಿದೆ. ಭಾರತೀಯ ಸೇನೆಯೂ ಶೀಘ್ರದಲ್ಲಿ ಇಲ್ಲಿಗೆ ಆಗಮಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಚುರಲ್ಮಲಾದಲ್ಲಿ ಕುಸಿದ ಮನೆಯೊಂದರಿಂದ ಮಗುವನ್ನು ರಕ್ಷಣಾ ಕಾರ್ಯಕರ್ತರು ಜೀವಂತವಾಗಿ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.