

ಮಂಗಳೂರು: ಸಾರ್ವಜನಿಕರು ತಮ್ಮ ಗಂಭೀರ ಸಮಸ್ಯೆಗಳನ್ನು ತಿಳಿಸಲು ಹಾಗೂ ತುರ್ತು ಪರಿಸ್ಥಿತಿಗಳನ್ನು ತಿಳಿಸಲು ಸಹಾಯವಾಗುವ ನಿಟ್ಟಿನಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಮೆಸ್ಕಾಂ) ಎರಡು ಹೊಸ ದೂರವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಮೆಸ್ಕಾಂನ 8277883388 ಅಥವಾ 0824-2950953 ಸಂಖ್ಯೆಗಳನ್ನು ಸಂಪರ್ಕಿಸಬಹುದು
ಈ ಸಂಖ್ಯೆಗಳನ್ನು ಗಂಭೀರ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಹಾಗೂ ಇತರ ಸಾಮಾನ್ಯ ಸೇವೆಗಳಿಗೆ, ಉಚಿತ ಸಹಾಯವಾಣಿ 1912 ಮತ್ತು ಸ್ಥಳೀಯ ಕಚೇರಿ ಸ್ಥಿರ ದೂರವಾಣಿ ಸಂಖ್ಯೆಗಳನ್ನು ಬಳಸಬೇಕು ಎಂದು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಶಿಥಿಲ ತಂತಿ, ಕಂಬಗಳ ಬದಲಾವಣೆಗೆ ವಿಶೇಷ ಆದ್ಯತೆ ಮೆಸ್ಕಾಂ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ತಂತಿ, ಕಂಬಗಳನ್ನು ಪರಿಶೀಲಿಸಿ ಅವುಗಳನ್ನು ಬದಲಾಯಿಸುವ ಕಾರ್ಯ ಆದ್ಯತೆ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕ ಸುರಕ್ಷೆ ದೃಷ್ಟಿಯಿಂದ ಗರಿಷ್ಠ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಳೆ-ಗಾಳಿಯಿಂದಾಗಿ ಪ್ರಸಕ್ತ ವರ್ಷದಲ್ಲಿ ಮೆಸ್ಕಾಂನ ಆಸ್ತಿಗಳಿಗೆ ಹಾನಿಯುಂಟಾಗಿ ಅಪಾರ ನಷ್ಟ ಸಂಭವಿಸಿದೆ. ವಿದ್ಯುತ್ ತಂತಿ, ಕಂಬಗಳ ಬದಲಾವಣೆಗೆ ಅಪಾರ ವೆಚ್ಚ ತಗಲುತ್ತಿದೆ. ಮೆಸ್ಕಾಂ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಿ ತತ್ಕ್ಷಣ ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದೆ.
ಒಂದೊಮ್ಮೆ ಶಿಥಿಲ ತಂತಿ, ಕಂಬಗಳು, ದೋಷಪೂರಿತ ವಿದ್ಯುತ್ ಪರಿವರ್ತಕಗಳು ಇಲಾಖೆಯ ಗಮನಕ್ಕೆ ಬಾರದೆ ಉಳಿದುಕೊಂಡಿದ್ದಲ್ಲಿ, ಸಾರ್ವಜನಿಕರು ಇದನ್ನು ಸ್ಥಳೀಯ ಮೆಸ್ಕಾಂ ಸಿಬಂದಿ ಗಮನಕ್ಕೆ ತಂದ ಬಳಿಕವೂ ಸ್ಪಂದನೆ ದೊರೆಯದಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.