ನವದೆಹಲಿ: ಒಂದು ವಾರದಲ್ಲಿ ಐದನೇ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟ ಸಚಿವರೊಂದಿಗೆ ಸಭೆ ನಡೆಸಿದ್ದಾರೆ.

ಲೋಕ್ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಸಂಜೆ 7 ಗಂಟೆಗೆ ಸಭೆ ನಡೆದಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅದರಂತೆ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ರಸಗೊಬ್ಬರ ಸಚಿವ ಸದಾನಂದ ಗೌಡ ಸಭೆಯಲ್ಲಿ ಹಾಜರಿದ್ದರು ಎಂದು ತಿಳಿದುಬಂದಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೂಡ ಹಾಜರಿದ್ದರು ಎಂದು ತಿಳಿದುಬಂದಿದೆ. ಬಿಜೆಪಿ ಪಕ್ಷದ ಆಡಳಿತ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಸಚಿವರೊಂದಿಗೆ ಹೀಗೆ ಪ್ರತ್ಯೇಕ ಮೀಟಿಂಗ್ಗಳನ್ನು ನಡೆಸಿ ಕೈಗೊಂಡಿರುವ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ.

ಕೊರೊನಾ ಎರಡನೇ ಅಲೆಯ ಕಾರಣದಿಂದ ಸವಾಲಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಚಿವರು ತಮ್ಮ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದೂ ಮಾಹಿತಿ ಕೇಳಿಬಂದಿದೆ. ಸಭೆಯು ಸುಮಾರು ಮೂರರಿಂದ ಐದು ಗಂಟೆಗಳ ಕಾಲ ನಡೆದಿದೆ. ಕ್ಯಾಬಿನೆಟ್ ದರ್ಜೆ ಸಚಿವರು ಹಾಗೂ ರಾಜ್ಯ ಸಚಿವರು ಕೂಡ ಸಭೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಕೃಷಿ, ಗ್ರಾಮೀಣಾಭಿವೃದ್ಧಿ, ಪಶು ಸಂಗೋಪನೆ, ಮೀನುಗಾರಿಕೆ, ಬುಡಕಟ್ಟು ಜನಾಂಗ, ನಗರಾಭಿವೃದ್ಧಿ, ಸಂಸ್ಕೃತಿ, ನಾಗರಿಕ ಸೇವೆ, ರೈಲ್ವೇ, ಆಹಾರ, ಜಲಶಕ್ತಿ, ಇಂಧನ, ಪರಿಸರ ಹೀಗೆ ಮುಂತಾದ ಸಚಿವರು ಕಳೆದ ವಾರದಿಂದ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸಂಪುಟ ಪುನಾರಚನೆ ಅಥವಾ ಸಚಿವ ಸಂಪುಟ ವಿಸ್ತರಣೆಯ ಸಾಧ್ಯತೆಯ ಬಗ್ಗೆಯೂ ಅಲ್ಲಲ್ಲಿ ಮಾಹಿತಿ ಕೇಳಿಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿತ್ತು. ಮುಂಗಾರು ಅಧಿವೇಶನಕ್ಕೂ ಮೊದಲು, ಅಂದರೆ ಈ ತಿಂಗಳ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ತಿಳಿದು ಬಂದಿತ್ತು.

ಸದ್ಯ ಪ್ರಧಾನಿ ಮೋದಿ ಸಂಪುಟದಲ್ಲಿ ಒಟ್ಟು 60 ಸಚಿವರಿದ್ದಾರೆ. ಒಟ್ಟು 79 ಸಚಿವರ ಅಗತ್ಯವಿದ್ದು, ಸದ್ಯದಲ್ಲೇ ವಿಸ್ತರಣೆಯಾಗಲಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದಲೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ವಿವಿಧ ಸಚಿವರುಗಳ ಕಾರ್ಯವೈಖರಿಯ ಪರಿಶೀಲನೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಸಚಿವ ಸಂಪುಟ ವಿಸ್ತರಣೆ, ಪುನಃರಚನೆ ವೇಳೆ ಮಾತ್ರ ಇಂಥ ಪರಿಶೀಲನೆ ಕೆಲಸ ನಡೆಯುತ್ತದೆ ಎಂದು ವರದಿಯಾಗಿತ್ತು.

