
ನವದೆಹಲಿ: ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ವಾಷಿಂಗ್ಟನ್ ಡಿಸಿಗೆ ಆಗಮಿಸಿದ್ದಾರೆ. ಭಾರತೀಯ ಕಾಲಮಾನ ಬೆಳಗ್ಗೆ 3.30ರ ಸುಮಾರಿಗೆ ವಾಷಿಂಗ್ಟನ್ DC ಯ ಆಂಡ್ರ್ಯೂಸ್ ವಾಯುನೆಕೆಗೆ ಬಂದಿಳಿದಿದ್ದಾರೆ. ಮೋದಿ ಅಮೆರಿಕದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಅವರನ್ನ ಅಲ್ಲಿನ ಭಾರತೀಯರು ಆತ್ಮೀಯವಾಗಿ ಸ್ವಾಗತಿಸಿದರು.

ಇಂದು ಐದು ಪ್ರಮುಖ ಕಂಪನಿಗಳ ಸಿಇಒಗಳನ್ನು ಭೇಟಿಯಾಗಲಿದ್ದಾರೆ -ಕ್ವಾಲ್ಕಾಮ್, ಅಡೋಬ್, ಫಸ್ಟ್ ಸೋಲಾರ್, ಜನರಲ್ ಅಟೊಮಿಕ್ಸ್ ಮತ್ತು ಬ್ಲ್ಯಾಕ್ಸ್ಟೋನ್ ಕಂಪನಿಗಳ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಕಂಪನಿಗಳ ಸಿಇಓಗಳನ್ನು ಆಹ್ವಾನಿಸಲಿದ್ದಾರೆ. ನಂತರ ರಾತ್ರಿ 11 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನ) ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರನ್ನು ವಿಲ್ಲಾರ್ಡ್ ಹೋಟೆಲ್‌ನಲ್ಲಿ ಭೇಟಿಯಾಗಲಿದ್ದಾರೆ.

ಬಳಿಕ ಐಸನ್‌ಹೋವರ್ ಎಕ್ಸಿಕ್ಯೂಟಿವ್ ಆಫೀಸ್ನಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ರನ್ನ ಭೇಟಿಯಾಗಲಿದ್ದಾರೆ. ಕಮಲಾ ಹ್ಯಾರಿಸ್ ಭೇಟಿ ವೇಳೆ ಜಾಗತಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ಭಾರತಕ್ಕೆ ಅನುಕೂಲವಾಗುವ ನೀತಿ, ನಿಯಮಗಳ ಬಗ್ಗೆ ಕಮಲಾ ಹ್ಯಾರಿಸ್ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ. ಕೊರೊನಾ ಕಾರಣದಿಂದ ಪ್ರಧಾನಿ ಮೋದಿ ಒಂದು ವರ್ಷದಿಂದ ಯಾವುದೇ ಪ್ರವಾಸ ಕೈಗೊಂಡಿರಲಿಲ್ಲ.


ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಶ್ವೇತ ಭವನಕ್ಕೆ ಭೇಟಿ ನೀಡಲಿದ್ದು, ಶ್ವೇತ ಭವನದಲ್ಲಿ ನಡೆಯುವ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲೇ ಕ್ವಾಡ್ ಸದಸ್ಯ ರಾಷ್ಟ್ರವಾಗಿರುವ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್, ಜಪಾನ್ ಪ್ರಧಾನಿ ಶಿಂಜೊ ಅಬೆ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಆಂತರಿಕ ಭದ್ರತೆ ಮಾತ್ರವಲ್ಲದೆ, ಹಲವಾರು ವಿಷಯಗಳ ಬಗ್ಗೆ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ನಡೆಯಲಿದೆ. ಕ್ವಾಡ್ ರಾಷ್ಟ್ರಗಳ ಸಭೆಯ ಬಳಿಕ ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸೆಪ್ಟಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಲಿದ್ದು, ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿಯೇ ಮೊದಲ ಭಾಷಣಕಾರರಾಗಿ ಹೊರ ಹೊಮ್ಮಲಿದ್ದಾರೆ.

ಅಮೆರಿಕಾದಲ್ಲಿ ‘ತಾಲಿಬಾನ್’ ಚರ್ಚೆ
ಅಮೆರಿಕಾ ಪ್ರವಾಸದಲ್ಲಿ ಪ್ರಧಾನಿ ಮೋದಿ ಅಫ್ಘಾನ್ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ಇನ್ನೂ ತಾಲಿಬಾನ್ ಕೈಗೆ ಯುಎಸ್ನ ದೊಡ್ಡಮಟ್ಟದ ಶಸ್ತ್ರಾಸ್ತ್ರಗಳು ಸಿಕ್ಕಿರುವುದು ಸಹಜವಾಗಿಯೇ ಭಾರತದ ಭದ್ರತೆಗೆ ಆತಂಕ ತಂದೊಡ್ಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಹೆಚ್ಚಾಗಿದ್ದು, ಸೆ.25ರಂದು ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಈ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಹೆಚ್ಚಿದೆ.


