ನವದೆಹಲಿ: ಯಾಸ್ ಚಂಡಮಾರುತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಒಡಿಶಾಕ್ಕೆ ಭೇಟಿ ನೀಡಲಿದ್ದಾರೆ. ನರೇಂದ್ರ ಮೋದಿ ಭುವನೇಶ್ವರ್ಗೆ ತೆರಳಲಿದ್ದು, ಅಲ್ಲಿಂದ ಬಾಳಾಸೋರ್, ಭದ್ರಕ್, ಪುರ್ಬಾ ಮೇದಿನಿಪುರ್ನಲ್ಲಿ ಉಂಟಾದ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಬಳಿಕ ಅಲ್ಲಿನ ಸಿಎಂ, ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಹಾಗೇ ಪಶ್ಚಿಮ ಬಂಗಾಳದ ಪರಿಸ್ಥಿತಿ ಬಗ್ಗೆಯೂ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ.

ಯಾಸ್ ಚಂಡಮಾರುತ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ, ಪಶ್ಚಿಮ ಮೇದಿನಿಪುರ, ಬಂಕುರಾ, ದಕ್ಷಿಣ 24 ಪರಗಣ ಮತ್ತು ಜಾಗ್ರಮ್ ಜಿಲ್ಲೆಗಳಲ್ಲಿ ಹಾಗೂ ಓಡಿಶಾದ ಭದ್ರಕ್, ಜಗತ್ಸಿಂಗ್ಪುರ್, ಕೇಂದ್ರಪರ, ಜೈಪುರ, ಕಿಯೋಂಜರ್ ಮತ್ತು ಮಯೂರ್ಭಂಜ್ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಉಂಟು ಮಾಡಿದೆ.

ಜಾರ್ಖಂಡ್ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಇಲ್ಲಿಯವರೆಗೆ 15,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ತೌಕ್ತೆ ಚಂಡಮಾರುತದಿಂದ ಉಂಟಾದ ಹಾನಿ ಪರಿಶೀಲನೆಗಾಗಿ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಗುಜರಾತ್ಗೆ ಭೇಟಿಕೊಟ್ಟು, ವೈಮಾನಿಕ ಸಮೀಕ್ಷೆ ನಡೆಸಿದ್ದರು. ಪರಿಹಾರವನ್ನೂ ಘೋಷಿಸಿದ್ದರು.

