ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮೀಸಲು ಅರಣ್ಯಪ್ರದೇಶ ಘೋಷಣೆಗೆ ಕೌಂಟ್ಡೌನ್ ಶುರುವಾಗಿದೆ. ಕೋರ್ಟ್ ಆದೇಶದಂತೆ ಜಾಗ ಗುರುತಿಸೋ ಕಾರ್ಯ ಮುಗಿದಿದ್ದು ವರದಿ ರೆಡಿಯಾಗಿದೆ. ಇದಕ್ಕೆ ಸಚಿವ ಸಂಪುಟದಿಂದ ಗ್ರೀನ್ ಸಿಗ್ನಲ್ ಸಿಗೋದೊಂದೇ ಬಾಕಿ ಉಳಿದಿದೆ.

ರಾಜ್ಯದ ಎತ್ತರದ ಶಿಖರವಾದ ಇದಕ್ಕೆ ಇನ್ಮುಂದೆ ಅಲ್ಲಿಗೆ ಹೋಗಬೇಕು ಅಂದ್ರೆ ಪರ್ಮಿಷನ್ ಪಡೀಬೇಕಾಗಬಹುದು. ಯಾಕಂದ್ರೆ ಮುಳ್ಳಯ್ಯನಗಿರಿ ಇನ್ನು ಮೀಸಲು ಪ್ರದೇಶವೆಂದು ಘೋಷಿಸಲ್ಪಡುತ್ತಿದೆ. ಹೀಗಾಗಿ ಸ್ಥಳೀಯ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಮುಳ್ಳಯ್ಯನಗಿರಿಯನ್ನು ಮೀಸಲು ಅರಣ್ಯ ಮಾಡುವಂತೆ ಹಸಿರು ಪೀಠ, ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಜನರ ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. ಅದರಂತೆ ಇದೀಗ ಜಿಲ್ಲಾಡಳಿತ, 15 ಸಾವಿರ ಎಕರೆ ಪ್ರದೇಶವನ್ನು ಗುರುತಿಸಿ ಅಂತಿಮ ವರದಿಯನ್ನು ಸಿದ್ದಪಡಿಸಿದೆ. ಇದು ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.

ಮೊದಲು ಅರಣ್ಯ ಮೀಸಲು ಪ್ರದೇಶಕ್ಕಾಗಿ 20 ಸಾವಿರ ಎಕರೆ ಪ್ರದೇಶವನ್ನ ಗುರುತಿಸಲಾಗಿತ್ತು. ಜನರ ತೀವ್ರ ವಿರೋಧದ ನಡುವೆ ಅಂತಿಮವಾಗಿ 15.897 ಸಾವಿರ ಎಕರೆ ಪ್ರದೇಶವನ್ನು ಜಿಲ್ಲಾಡಳಿತ ಗುರುತಿಸಿದೆ. ಶೀಘ್ರದಲ್ಲೇ ಸಚಿವ ಸಂಪುಟದಿಂದ ಆ ವರದಿಗೆ ಅಂತಿಮ ಮುದ್ರೆ ಬೀಳಲಿದೆ. ಅದೊಂದಾದರೆ ಈ ಪ್ರದೇಶ ಮೀಸಲು ಪ್ರದೇಶ ಘೋಷಣೆಯಾಗುತ್ತದೆ.

ಇದರಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬೀಳುತ್ತೆ ಅನ್ನೋದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆ ಕ್ಯಾಬಿನೆಟ್ ಮುದ್ರೆ ಬಿದ್ದ ಬಳಿಕ ಕೇಂದ್ರ ಪರಿಸರ ಸಚಿವಾಲಯದಲ್ಲಿ ಮೀಸಲು ಅರಣ್ಯ ಎಂದು ಘೋಷಣೆಯಾದರೆ, ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಬಾಗಿಲು ಸಂಪೂರ್ಣ ಬಂದ್ ಆಗಲಿದೆ.










