


ಕೊಹಿಮಾ: ಭಾರೀ ಮಳೆಯಿಂದಾಗಿ ನಾಗಾಲ್ಯಾಂಡ್‌ನ ಮಾನ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿಯವರೆಗೆ 4 ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿದ್ದರಿಂದ ಭೂಕುಸಿತ ಸಂಭವಿಸಿದೆ. ಈ ಅವಘಡದಲ್ಲಿ ಕನಿಷ್ಟ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಭೂಕುಸಿತದಿಂದ ಹಲವಾರು ಮನೆಗಳು ಕೊಚ್ಚಿಹೋಗಿವೆ. ಭೂಕುಸಿತದ ನಂತರ ಹೆಚ್ಚಿನ ಪ್ರಮಾಣದ ನೀರು ಆ ಪ್ರದೇಶಕ್ಕೆ ನುಗ್ಗುತ್ತಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಸ್ವಯಂಸೇವಕರು, ಪೊಲೀಸ್ ಮತ್ತು ಸೇನಾ ಸಿಬ್ಬಂದಿ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಭೂಕುಸಿತದ ದುರಂತದ ಬಗ್ಗೆ ನಾಗಾಲ್ಯಾಂಡ್ ಸಿಎಂ ನೀಫಿಯು ರಿಯೊ ಮೃತರಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 74,000 ರೂ. ತಕ್ಷಣದ ಪರಿಹಾರ ಘೋಷಿಸಿದ್ದಾರೆ.
ಸರ್ಕಾರವು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಜಾಗರೂಕರಾಗಿರಲು ನಿರ್ದೇಶಿಸಿದೆ. ಅಲ್ಲದೇ ಸಾರ್ವಜನಿಕರು ಜಾಗರೂಕರಾಗಿರಲು, ಇಳಿಜಾರುಗಳು, ನದಿ ದಂಡೆಗಳು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರ ಇರಲು ಸೂಚಿಸಲಾಗಿದೆ.








