ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಎಲ್ಲ ರಾಜ್ಯದ ಸಿಎಂಗಳ ಜತೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 2ನೇ ಹಂತದ ಅನ್ ಲಾಕ್ ಅವಧಿ ಮುಕ್ತಾಯದ ಹಂತಕ್ಕೆ ತಲುಪಿದ ಹಿನ್ನಲೆಯಲ್ಲಿ ಪಿಎಂ ಮೋದಿ ಸಭೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಜುಲೈ ತಿಂಗಳ ಅಂತ್ಯಕ್ಕೆ ಲಾಕ್ ಡೌನ್ ಸಡಿಲಿಕೆ ಮಾರ್ಗಸೂಚಿಗಳ ಅವಧಿ ಮುಕ್ತಾಯವಾಗಲಿದೆ. ಕೊರೊನಾ ಸೋಂಕು ಹರಡಿದ ಆರಂಭದಿಂದ ಈವರೆಗೆ 6 ಬಾರಿ ಸಿಎಂಗಳ ಜತೆ ಪ್ರಧಾನಿ ಸಭೆ ನಡೆಸಿದ್ದಾರೆ. ಹೀಗಾಗಿ ಸೋಮವಾರ ನಡೆಯಲಿರುವ ಸಭೆಯಲ್ಲಿ ಕೊರೊನಾ ನಿಯಂತ್ರಣದ ಪರಿಸ್ಥಿತಿ ಬಗ್ಗೆ ಎಲ್ಲ ರಾಜ್ಯ ಸಿಎಂಗಳ ಜತೆ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಇದಲ್ಲದೇ, ಸೋಮವಾರ ನೋಯ್ಡಾ, ಕೋಲ್ಕತ್ತಾ,ಮುಂಬೈಯಲ್ಲಿ ಐಸಿಎಂಆರ್ ನ ಮೂರು ಹೊಸ ಲ್ಯಾಬ್ ಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ.
