





ಮಂಗಳೂರು: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ 21-06-2026 ರಂದು ನಡೆಯಲಿರುವ ನೀಟ್ (NEET UG-2026) ಪರೀಕ್ಷೆಯು ಸುಗಮವಾಗಿ, ನ್ಯಾಯಯುತವಾಗಿ ಮತ್ತು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಮಂಗಳೂರು ನಗರದ ಒಟ್ಟು 12 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.
ಈ ಕುರಿತು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು (DCP) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಶ್ರೀ ಕೆ. ರವಿಶಂಕರ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಮುಖ ಮುಂಜಾಗ್ರತಾ ಕ್ರಮಗಳು ಮತ್ತು ನಿರ್ಬಂಧಗಳು:
- ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿಹಾಗೂ ಪರೀಕ್ಷಾ ಅವಧಿ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿರುವ ಎಲ್ಲಾ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಪರೀಕ್ಷೆಗೆ ಸಂಬಂಧಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ,ಸಾರ್ವಜನಿಕರು ಐದು ಅಥವಾ ಐದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಹಾಗೂ ಪರೀಕ್ಷಾ ಕೇಂದ್ರದ ಸುತ್ತಮುತ್ತ ತಿರುಗಾಡುವುದನ್ನು ನಿಷೇಧಿಸಲಾಗಿದೆ.
- ಪರೀಕ್ಷಾ ಕೇಂದ್ರದ ಆವರಣದಲ್ಲಿ ಮೊಬೈಲ್ ದೂರವಾಣಿ, ಬ್ಲೂಟೂತ್, ಪೇಜರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ಸಂಪರ್ಕ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
- ನಿಷೇಧಿತ ವಲಯದಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು/ರವಾನಿಸುವುದು ಹಾಗೂ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳಿಗಾಗಿ ಸಂಜ್ಞೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
- ಈ ಪ್ರದೇಶದಲ್ಲಿ ಯಾವುದೇ ರೀತಿಯ ಕ್ಷಾರಕ (ಆಸಿಡ್), ಸ್ಪೋಟಕ ವಸ್ತುಗಳು ಅಥವಾ ಇನ್ನಿತರ ಮಾರಕ ಆಯುಧಗಳನ್ನು ಕೊಂಡುಹೋಗುವುದನ್ನು ಕಟ್ಟುನಿಟ್ಟಾಗಿ. ನಿಷೇಧಿಸಲಾಗಿದೆ.
ಈ ನಿಷೇಧಾಜ್ಞೆಯು ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾಂಕ್ ಭದ್ರತಾ ಸಿಬ್ಬಂದಿಯ ಭದ್ರತಾ ಉಪಕರಣಗಳ ಬಳಕೆಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.
ನಿಷೇಧಾಜ್ಞೆ ಜಾರಿಯಲ್ಲಿರುವ 12 ಪರೀಕ್ಷಾ ಕೇಂದ್ರಗಳು:
- ಗೌರ್ಮೆಂಟ್ ಪಿಯು ಕಾಲೇಜ್ ಫಾರ್ ಗರ್ಲ್ಸ್, ಬಲ್ಮಠ, ಮಂಗಳೂರು
- ಗೌರ್ಮೆಂಟ್ ಫರ್ಸ್ಟ್ ಗ್ರೇಡ್ ಕಾಲೇಜ್ ಫಾರ್ ವುಮೆನ್, ಬಲ್ಮಠ, ಮಂಗಳೂರು
- ಸೆಂಟ್ ಆಗ್ನೆಸ್ ಪಿಯು ಕಾಲೇಜ್, ಬೆಂದೂರ್, ಮಂಗಳೂರು
- ಸೆಂಟ್ ಅಲೋಶಿಯಸ್ ಡೀಮ್ಸ್ ಟು ಬಿ ಯೂನಿವರ್ಸಿಟಿ, ಎಲ್.ಹೆಚ್.ಹೆಚ್ ರೋಡ್, ಮಂಗಳೂರು
- ಡಾ. ದಯಾನಂದ ಪೈ-ಸತೀಶ್ ಪೈ ಗೌರ್ಮೆಂಟ್ ಫರ್ಸ್ಟ್ ಗ್ರೇಡ್ ಕಾಲೇಜ್, ರಥಬೀದಿ, ಮಂಗಳೂರು
- ಸೆಂಟ್ ಅಲೋಶಿಯಸ್ ಪಿಯು ಕಾಲೇಜ್ (ಬ್ಲಾಕ್-A), ಕೊಡಿಯಾಲ್ ಬೈಲ್, ಮಂಗಳೂರು
- ಸೆಂಟ್ ಅಲೋಶಿಯಸ್ ಪಿಯು ಕಾಲೇಜ್ (ಬ್ಲಾಕ್-B), ಕೊಡಿಯಾಲ್ ಬೈಲ್, ಮಂಗಳೂರು
- ವಿದ್ಯಾಡಾಯಿನಿ ಹೈಸ್ಕೂಲ್, ಸುರತ್ಕಲ್
- ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ-2, ಎಕ್ಕೂರು, ಮಂಗಳೂರು
- ಯೂನಿವರ್ಸಿಟಿ ಕಾಲೇಜ್, ಯು.ಪಿ. ಮಲ್ಯ ರೋಡ್, ಹಂಪನಕಟ್ಟೆ, ಮಂಗಳೂರು
- ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ-1, ಪಣಂಬೂರು, ಮಂಗಳೂರು
- ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ, ಮುಡಿಪು, ಕುರ್ನಾಡು, ದಕ್ಷಿಣ ಕನ್ನಡ
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಆಯಾ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ.








