ನೆಲ್ಯಾಡಿ:-ನೆಲ್ಯಾಡಿ ಸಮೀಪದ ಪೆರಿಯಶಾಂತಿಯಿಂದ ಇಚಿಲಂಪಾಡಿವರೆಗಿನ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಗಳಲ್ಲಿ ಕಿಡಿಗೇಡಿಗಳು ಕಸ, ತ್ಯಾಜ ತಂದು ಹಾಕುತ್ತಿದ್ದು ದಾಖಲೆ ಸಹಿತ ಮಾಹಿತಿ ನೀಡಿದವರಿಗೆ ನೀತಿ ಟ್ರಸ್ಟ್ ಎಂಬ ಸಾಮಾಜಿಕ ಸಂಘಟನೆ 2000 ರೂ ನಗದು ಬಹುಮಾನ ಘೋಷಿಸಿದೆ.
ನೀತಿ ತಂಡದ ಅಧ್ಯಕ್ಷ ಜಯನ್ ಟಿ ಈ ಬಹುಮಾನ ಘೋಷಣೆ ಮಾಡಿದ್ದು ಸಾರ್ವಜನಿಕರು ಸಂಚರಿಸುವ ರಸ್ತೆಯನ್ನು ತ್ಯಾಜ್ಯ ಮುಕ್ತವನ್ನಾಗಿಸುವುದು ಬಹುಮಾನದ ಹಿಂದಿನ ಉದ್ದೇಶವಾಗಿದೆ. ಯಾರೇ ಸಾರ್ವಜನಿಕರು ಕಸ ಎಸೆಯುವವರ ಪೋಟೊ,ವೀಡಿಯೋ ಅಥವಾ ಪೂರಕ ದಾಖಲೆ ನೀಡಿ ಬಹುಮಾನ ಪಡೆಯಬಹುದಾಗಿದೆ. ಗ್ರಾ.ಪಂ ಗಳು ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರೂ ಜನರು ಮಾತ್ರ ಜಾಗೃತರಾಗುತ್ತಿಲ್ಲ,ಎಲ್ಲೆಂದರಲ್ಲಿ ಕಸತ್ಯಾಜ್ಯ ಬಿಸಾಡಿ ಪರಿಸರ ಮಾಲಿನ್ಯ ಮಾಡಿ ಸಾಂಕ್ರಾಮಿಕ ರೋಗ ಹರಡಲು ಕಾರಣರಾಗುತ್ತಿದ್ದಾರೆ ಎಂದು ಜಯನ್ ದೂರಿದ್ದಾರೆ.
ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವ ಈ ರಾಜ್ಯ ಹೆದ್ದಾರಿ ರಸ್ತೆಯ ಪರಿಸರ ದುರ್ನಾತ ಬೀರುತ್ತಿದೆ,ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರು, ವಾಹನ ಸವಾರರು ನಿತ್ಯವೂ ದುರ್ನಾತವನ್ನು ಸಹಿಸಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.ಮಾತ್ರವಲ್ಲದೇ ನದಿ ನೀರಿಗೂ ತ್ಯಾಜ್ಯ ತಂದು ಹಾಕುವ ಸ್ಥಿತಿ ಎದುರಾಗಿದ್ದು,ಮಂಗಳೂರಿನ ಜನರೂ ಇದೇ ನೀರನ್ನು ಕುಡಿಯುತ್ತಿರುವುದಾಗಿ ಜಯನ್ ರವರು ಆರೋಪಿಸಿದ್ದಾರೆ.