Sunday, May 19, 2024
spot_imgspot_img
spot_imgspot_img

ಮುಸ್ಲಿಂ ಯುವಕನ ಮೇಲೆ ದೈವದ ಆವೇಶ; 18ವರ್ಷಗಳಿಂದ ಸ್ಥಗಿತಗೊಂಡ ನೇಮೋತ್ಸವ- ಪ್ರತಿಷ್ಠಿತ ಕಂಪನಿಯ ಭೂಸ್ವಾಧಿನ ದೈವರಾಧನೆಗೆ ಅಡ್ಡಿಯಾಯಿತೇ..?

- Advertisement -G L Acharya panikkar
- Advertisement -

ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶ ಅಂತಾನೆ ಕರೆಸಿಕೊಳ್ಳುವ ಕರಾವಳಿಯಲ್ಲಿ ತುಳುನಾಡಿನ ಕಾರ್ಣಿಕ ದೈವ ಶಕ್ತಿಯೊಂದು ಮುಸ್ಲಿಂ ಯುವಕನೊಬ್ಬನ ಮೇಮೇಲೆ ಆವಾಹನೆಯಾಗೋ ಮೂಲಕ ಎಲ್ಲರನ್ನೂ ಚಕಿತಗೊಳಿಸಿದೆ. ಮಂಗಳೂರು ಹಲವು ವರ್ಷಗಳಿಂದ ದೈವವೊಂದರ ಸೇವೆ ಸ್ಥಗಿತಗೊಂಡಿದ್ದು, ದೈವಸ್ಥಾನದ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ದೈವವೇ ಒರಿಸ್ಸಾ ಮೂಲದ ಮುಸ್ಲಿಂ ಯುವಕನೊಬ್ಬನ ಮೈಮೇಲೆ ಏಕಾಏಕಿ ಆವಾಹನೆಗೊಂಡು ಎಚ್ಚರಿಕೆ ನೀಡಿದ ಘಟನೆ ಎರಡು ತಿಂಗಳ ಹಿಂದೆ ಮಂಗಳೂರು ಹೊರವಲಯದ ಪೆರ್ಮುದೆಯಲ್ಲಿನ ಪಿಲಿ ಚಾಮುಂಡಿ ದೇವಸ್ಥಾನದಲ್ಲಿ ನಡೆದಿದೆ.

ಒರಿಸ್ಸಾ ಮೂಲದ ಕಾರ್ಮಿಕ ಮುಸ್ಲಿಂ ಯುವಕನ ಮೇಲೆ ದೈವದ ಆವೇಶ ಕಾಣಿಸಿಕೊಂಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪೆರ್ಮುದೆ ಸೋಮನಾಥೇಶ್ವರ ದೇಗುಲದ ಬಳಿಯ ಪಿಲಿಚಾಮುಂಡಿ ದೈವಸ್ಥಾನದ ತಡೆಗೋಡೆ ಕಾಮಗಾರಿಯನ್ನು ಒರಿಸ್ಸಾ ಮೂಲದ ಕಾರ್ಮಿಕರ ತಂಡ ಮಾಡುತ್ತಿತ್ತು.

ಈ ವೇಳೆ ಇದ್ದಕ್ಕಿದ್ದಂತೆ ಮುಸ್ಲಿಂ ಯುವಕನಿಗೆ ಆವೇಶ ಬಂದಿದ್ದು, ಏಕಾಏಕಿ ದೈವ ದರ್ಶನದ ಮಾದರಿಯಲ್ಲಿ ಆವಾಹನೆ ಕಂಡು ಬಂದಿದೆ. ಮುಸ್ಲಿಂ ಯುವಕನ ಮೇಲೆ ದೈವದ ಆವೇಶ ಬಂದಿರೋದು ಇಡೀ ಪೆರ್ಮುದೆ ಗ್ರಾಮಸ್ಥರನ್ನ ಅಚ್ಚರಿಕೆ ತಳ್ಳಿದ್ದು, ಕೊನೆಗೆ ಗ್ರಾಮದ ಹಿರಿಯರು, ದೈವಾರಾಧಕರೆಲ್ಲರೂ ಸೇರಿ ಈ ಘಟನೆಗೆ ಕಾರಣ ತಿಳಿಯೋ ಉದ್ದೇಶದಿಂದ ಪ್ರಶ್ನಾಚಿಂತನೆಗೆ ಮುಂದಾಗಿದ್ದಾರೆ. ಸೋಮನಾಥೇಶ್ವರ ದೇವಸ್ಥಾನದ ಅಂಗಳದಲ್ಲಿ ಪ್ರಶ್ನಾಚಿಂತನೆಗೆ ಮುಂದಾಗಿದ್ದಾರೆ. ಆತನನ್ನ ಕೂರಿಸಿ ಪ್ರಶ್ನಾ ಚಿಂತನೆ ಹಾಕಿದ್ದಾರೆ. ಆಗ ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ದೈವವೊಂದರ ಕಾರ್ಣಿಕ ಸಾರುವ ಜಾಗದಲ್ಲಿ ಹಲವಾರು ವರ್ಷಗಳಿಂದ ಸಲ್ಲಬೇಕಾದ ದೈವಾರಾಧನೆ ಸಲ್ಲದೇ ಇದ್ದ ಕಾರಣಕ್ಕೆ ದೈವ ಮುನಿಸಿಕೊಂಡಿದೆಯಂತೆ‌. ಹಲವು ವರ್ಷಗಳಿಂದ ಆ ಜಾಗದಲ್ಲಿ ನೇಮೋತ್ಸವ ನಡೆಯದ ಕಾರಣ ದೈವ ಇಡೀ ಗ್ರಾಮಕ್ಕೆ ಎಚ್ಚರಿಕೆ ಕೊಟ್ಟಿದೆ. ಹಲವು ವರ್ಷಗಳಿಂದ ಹಲವು ವಿಧಗಳಲ್ಲಿ ಎಚ್ಚರಿಕೆ ರವಾನಿಸಿದ್ದ ದೈವ ಈ ಬಾರಿ ಒರಿಸ್ಸಾದ ಮುಸ್ಲಿಂ ಯುವಕನ ಮೈಮೇಲೆ ಆಹಾವನೆಯಾಗೋ ಮೂಲಕ ಸಂದೇಶ ರವಾನಿಸಿದೆ.

ಸದ್ಯ ಪೆರ್ಮುದೆಯಲ್ಲಿ ಕಾರ್ಣಿಕ ಮೆರೆದ ಆ ದೈವವೇ ಪಿಲ್ಚಂಡಿ. ತುಳುವರು ಬಹಳ ನಂಬುಗೆಯಿಂದ ಪಿಲ್ಚಂಡಿ ಅಥವಾ ಪಿಲಿಚಾಮುಂಡಿ ಅಂತ ಇದನ್ನ ಕರೆಯುತ್ತಾರೆ. ಕನ್ನಡದಲ್ಲಿ ವ್ಯಾಘ್ರ ಚಾಮುಂಡಿ ಅಂತಲೂ ಕರೆಯೋ ಈ ದೈವ ಈ ಭಾಗದ ಲಕ್ಷಾಂತರ ಜನರ ಸಾವಿರ ವರ್ಷಗಳ ನಂಬಿಕೆಯ ಪ್ರತೀಕ.

ಅಸಲಿಗೆ ಪೆರ್ಮುದೆಯಲ್ಲಿ ಜನರ ನಂಬಿಕೆಯ ಶಕ್ತಿಯಾಗಿ ನೆಲೆಯಾಗುವ ಪಿಲಿಚಾಮುಂಡಿ ದೈವ ಮೊದಲು ನೆಲೆಯಾಗಿದ್ದೆ ಈ ಕಾಯರ್ ಕಟ್ಟೆ ಅನ್ನೋ ಜಾಗದಲ್ಲಿ. ಸಣ್ಣ ಕಟ್ಟೆಯ ಮಾದರಿಯಲ್ಲಿ ಇರೋ ಜಾಗದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಪಿಲಿಚಾಮುಂಡಿ ದೈವ ನೆಲೆಯಾಗಿದ್ದು, ಪೆರ್ಮುದೆ ಗ್ರಾಮದ ಹಿರಿಯರು ನೂರಾರು ವರ್ಷಗಳಿಂದ ಇಲ್ಲಿ ಪಿಲಿಚಾಮುಂಡಿ ದೈವವನ್ನ ನಂಬಿಕೊಂಡು ಬಂದಿದ್ದಾರೆ. ವರ್ಷಂಪ್ರತಿ ನೇಮೋತ್ಸವ ನಡೆದು ಬಳಿಕ ದೈವಾರಧನೆ ನಡೀತಾ ಇತ್ತು. ಆದರೆ ಸುಮಾರು 18 ವರ್ಷಗಳ ಹಿಂದೆ ಇಲ್ಲಿ ದೈವಾರಾಧನೆ ನಡೆದಿದ್ದು, ಆ ಬಳಿಕ ಈ ಕಾಯರ್ ಕಟ್ಟೆಯ ಪಿಲಿಚಾಮುಂಡಿ ನೆಲೆನಿಂತ ಜಾಗದಲ್ಲಿ ಯಾವುದೇ ನೇಮೋತ್ಸವ ನಡೆದಿಲ್ಲ. ಅಷ್ಟಕ್ಕೂ ಕಳೆದ 18 ವರ್ಷಗಳಿಂದ ಇಲ್ಲಿ ನೇಮೋತ್ಸವ ಯಾಕೆ‌ ನಡೆದಿಲ್ಲ ಎಂಬುದಕ್ಕೆ ಕಾರಣ ಆ ಜಾಗದಲ್ಲಿ ರಕ್ಕಸನಂತೆ ಆವರಿಸಿಕೊಂಡಿರೋ ಬೃಹತ್ ಕೈಗಾರಿಕಾ ಕಂಪೆನಿ. ಬೃಹತ್ ಕೈಗಾರಿಕೆಯ ಕಾರಣಕ್ಕೆ ತುಳುನಾಡಿನ ಸಾವಿರ ಸಾವಿರ ವರ್ಷಗಳ ನಂಬಿಕೆಯೊಂದರ ಆರಾಧನೆಯ ನಿಂತು ಹೋಗಿದೆ.

1992ರಲ್ಲಿ ಸಮುದ್ರಕ್ಕೆ ಹತ್ತಿರವಿರೋ ಕಾರಣದಿಂದ ಸುರತ್ಕಲ್ ನಿಂದ ಪೆರ್ಮುದೆವರೆಗಿನ ನೂರಾರು ಎಕರೆ ಜಾಗವನ್ನು ಪ್ರತಿಷ್ಠಿತ ಕಂಪನಿಯ ಸ್ಥಾಪನೆಗಾಗಿ ಭೂ ಸ್ವಾಧೀನ ಮಾಡಲಾಯಿತು. ಕಳೆದ ಮೂರು ದಶಕಗಳ ಹಿಂದೆ ಕಂಪನಿಗಾಗಿ ಜಮೀನು ಭೂಸ್ವಾಧೀನಗೊಂಡಿದ್ದು, ಆ ಸಂದರ್ಭ ಕುತ್ತೆತ್ತೂರು ಗ್ರಾಮದ ಪೆರ್ಮುದೆಯ ಕಾಯರ್ ಕಟ್ಟೆ ಎಂಬ ಜಾಗದಲ್ಲಿದ್ದ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪುನರ್ವಸತಿ ಪ್ರದೇಶದಲ್ಲಿನ ಅಂದರೆ 200-300 ಮೀಟರ್ ದೂರದ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡಿತ್ತು.

ಬಳಿಕ ಕಾಲ ಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆದು ಪೆರ್ಮುದೆಯಲ್ಲಿ ಪ್ರತೀ ವರ್ಷ ನೇಮೋತ್ಸವ ನಡೀತಾ ಇದೆ. ಆದರೆ ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ಪಿಲಿಚಾಮುಂಡಿ ದೈವದ ನಾಲ್ಕು ಗಡು ಇದ್ದು, ಪ್ರಸುತ್ತ ಕಾಯರ್ ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುವಾಗಿದೆ.‌ ಈ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಕಳೆದ 18 ವರ್ಷಗಳಿಂದ ಸ್ಥಗಿತಗೊಂಡಿದ್ದು, ಇದೇ ಕಾರಣಕ್ಕೆ ಕಾಯರ್ ಕಟ್ಟೆಯಲ್ಲಿ ನೆಲೆಯಾಗಿರೋ ಪಿಲಿಚಾಮುಂಡಿ ದೈವ ಮುನಿಸಿಕೊಂಡಿದೆ.

ಕಂಪನಿ ಸ್ಥಾಪನೆ ವೇಳೆ ಸಾವಿರಾರು ಮನೆಗಳು, ಹಲವು ದೇವಸ್ಥಾನ, ದೈವಸ್ಥಾನಗಳು ಸ್ಥಳಾಂತರಗೊಂಡವು. ಆದರೆ ಕಾಯರ್ ಕಟ್ಟೆಯ ಪಿಲಿಚಾಮುಂಡಿ ದೈವದ ಗಡು ಜಾಗವನ್ನ ಯಾವ ಕಂಪೆನಿಗೂ ಮುಟ್ಟಲು ಸಾಧ್ಯವಾಗಲೇ ಇಲ್ಲ. ಹಿಂದೆ ಕಾಯರ್ ಕಟ್ಟೆ ಬಳಿ ಇದ್ದ ನೂರಾರು ಮನೆಗಳು ಭೂ ಸ್ವಾಧೀನಗೊಂಡು ಬೇರೆ ಜಾಗಕ್ಕೆ ಸ್ಥಳಾಂತರವಾಗಿದೆ. ಸದ್ಯ ಈ ಕಾಯರ್ ಕಟ್ಟೆಯನ್ನು ಸಂಪೂರ್ಣವಾಗಿ ಕಂಪನಿ ಆವರಿಸಿದೆ.

18 ವರ್ಷಗಳ ಹಿಂದೆ ಕೊನೆಯ ಬಾರಿಗೆ ಕಂಪನಿಯವರು ಗ್ರಾಮಸ್ಥರ ಜೊತೆ ಸೇರಿಕೊಂಡು ನೇಮೋತ್ಸವ ಮಾಡಿ ದೈವಾರಾಧನೆ ನಡೆಸಿದ್ದಾರೆ. ಆ ಬಳಿಕ ಕಂಪನಿ ಹೇರಿದ ಕೆಲ ನಿರ್ಬಂಧಗಳ ಕಾರಣಕ್ಕೆ ಇಲ್ಲಿ ಪಿಲಿಚಾಮುಂಡಿ ದೈವದ ಆರಾಧನೆ ನಡೆದಿಲ್ಲ ಅನ್ನೋದು ಸ್ಥಳೀಯ ದೈವಾರಾಧಕರ ಮಾತು. ಹಲವು ತಾಂತ್ರಿಕ ಕಾರಣಗಳಿಂದ ಇಲ್ಲಿ ದೈವಾರಧನೆಯ ಕೆಲ ವಿಧಾನಗಳಿಗೆ ತಡೆಯಾಗಿದೆ ಎನ್ನಲಾಗಿದೆ. ಪೆಟ್ರೋಲಿಯಂ ಕಂಪೆನಿಯಾದ ಕಾರಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಂಕಿ ಉರಿಸುವಂತಿಲ್ಲ. ಅಲ್ಲದೇ ಈ ಕಾಯರ್ ಕಟ್ಟೆ ಪಿಲಿಚಾಮುಂಡಿ ದೈವಸ್ಥಾನ ಕಂಪನಿಯ ತಡೆಗೋಡೆಗೆ ತಾಗಿಕೊಂಡೇ ಇದೆ.

ಅಗ್ನಿಯ ಬಳಕೆಗೆ ಈ ಪ್ರದೇಶದಲ್ಲಿ ಅವಕಾಶ ಇಲ್ಲದ ಕಾರಣ ಈ ಸಂಸ್ಥೆ ನಿರ್ಬಂಧ ವಿಧಿಸಿದೆ ಎನ್ನಲಾಗಿದೆ. ಆದರೆ ಪಿಲಿಚಾಮುಂಡಿ ದೈವ ಈ ಬಗ್ಗೆ ಎಚ್ಚರಿಸುತ್ತಲೇ ಇದೆ. ಪೆರ್ಮುದೆಯ ಮತ್ತೊಂದು ಪಿಲಿಚಾಮುಂಡಿ ದೈವದ ದೈವಸ್ಥಾನದ ನೇಮೋತ್ಸವದ ವೇಳೆಯೂ ಸೂಚನೆ ಕೊಟ್ಟಿತ್ತು. 2023ರ ಎಪ್ರಿಲ್ ನಲ್ಲಿ ಪೆರ್ಮುದೆಯ ಮತ್ತೊಂದು ಪಿಲಿಚಾಮುಂಡಿ ದೈವಸ್ಥಾನದಲ್ಲಿ ನಡೆದ ನೇಮೋತ್ಸವ ವೇಳೆಯೂ ದೈವ ನುಡಿದಿದ್ದು, ಕಾಯರ್ ಕಟ್ಟೆಯ ದೈವಾರಾಧನೆ ನಿಲ್ಲಿಸಿದ ಬಗ್ಗೆ ಎಚ್ಚರಿಕೆ ಕೊಟ್ಟಿತ್ತಂತೆ.

ಆದರೆ ಕಂಪನಿ ಕಾರಣಕ್ಕೆ ಗ್ರಾಮಸ್ಥರು ಅಸಹಾಯಕರಾಗಿದ್ದು, ಇದೀಗ ಮುಸ್ಲಿಂ ಯುವಕನ ಮೇಲೆ ಆವೇಶ ಬರೋ ಮೂಲಕ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿದೆ. ಕಂಪನಿಗಾಗಿ ಭೂಸ್ವಾಧೀನಗೊಂಡ ಕಾರಣ ಈ ಸಮಸ್ಯೆಗಳು ಎದುರಾಗಿರುವುದರಿಂದ ನೇಮೋತ್ಸವಕ್ಕೆ ಸೂಕ್ತವಾಗುವ ರೀತಿಯಲ್ಲಿ ಸ್ಥಳವನ್ನು ಜೀರ್ಣೋದ್ದಾರಗೊಳಿಸುವ ಕಾರ್ಯದಲ್ಲಿ ಕಂಪೆನಿಯೇ ಮೇಲುಸ್ತುವಾರಿ ವಹಿಸಬೇಕಿದೆ. ಅಲ್ಲದೇ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.ಮತ್ತೆ ಯಾವ ರೀತಿ ಇಲ್ಲಿ ನೇಮೋತ್ಸವ ನಡೆಸಬೇಕು ಎಂಬ ಬಗ್ಗೆ ಗ್ರಾಮಸ್ಥರು ಹಾಗೂ ಕಂಪೆನಿ ಯೋಚಿಸಬೇಕಿದೆ‌‌. ಇಲ್ಲದೇ ಇದ್ದರೆ ಮತ್ತಷ್ಟು ಅನಾಹುತಗಳಿಗೆ ದಾರಿ ಮಾಡಿ ಕೊಟ್ಟಾಂತಾಗುತ್ತೆ ಅನ್ನೋದೇ ಗ್ರಾಮಸ್ಥರ ಅಭಿಪ್ರಾಯ.

- Advertisement -

Related news

error: Content is protected !!