ನವದೆಹಲಿ, ಜುಲೈ 09: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ಬಂದ್ ಮಾಡಲಾಗಿದೆ. ಭಾರತ- ನೇಪಾಳ ನಡುವಿನ ಗಡಿ ವಿವಾದ ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬಂದಿತ್ತು.ಭಾರತದ ಸುದ್ದಿ ವಾಹಿನಿಗಳ ಪ್ರಸಾರ ಬಂದ್ ಮಾಡಲಾಗಿದೆ ಎಂದು ಕೇಬಲ್ ಆಪರೇಟರ್‌ಗಳು ಹೇಳಿದ್ದಾರೆ ಎಂದು ANI ವರದಿ ಮಾಡಿದೆ. ಆದರೆ, ಪ್ರಸಾರ ಬಂದ್ ಮಾಡುವ ಕುರಿತು ಸರ್ಕಾರದಿಂದ ಅಧಿಕೃತವಾದ ಯಾವುದೇ ಆದೇಶ ಇದುವರೆಗೂ ಪ್ರಕಟವಾಗಿಲ್ಲ. ಸುಮಾರು ಆರು ತಿಂಗಳ ಹಿಂದೆ ಭಾರತ ಉತ್ತರಾಖಂಡ-ನೇಪಾಳ ಗಡಿ ಪ್ರದೇಶದಲ್ಲಿ ಬರುವ ಕಾಲಾಪಾನಿಯನ್ನು ತನ್ನ ವ್ಯಾಪ್ತಿಗೆ ಸೇರಿಸಿ ಪರಿಷ್ಕೃತ ಭೂಪಟ ಬಿಡುಗಡೆ ಮಾಡಿತ್ತು. ಭಾರತದ ಮೂರು ಭೂ ಪ್ರದೇಶವನ್ನು ತನ್ನದು ಎಂದು ಬಿಂಬಿಸಿ ಜೂನ್ 18ರಂದು ನೇಪಾಲ ಹೊಸ ನಕ್ಷೆಯನ್ನು ಸಂಸತ್‌ನಲ್ಲಿ ಮಂಡನೆ ಮಾಡಿತ್ತು.
ಈ ಬೆಳವಣಿಗೆ ಬಳಿಕ ಭಾರತ-ನೇಪಾಳ ನಡುವಿನ ಸಂಬಂಧ ಹಳಸಿದೆ. ಮತ್ತೊಂದು ಕಡೆ ನೇಪಾಳಕ್ಕೆ ಚೀನಾ ಬೆಂಬಲ ನೀಡುತ್ತಿದೆ. ಪ್ರಧಾನಿ ಕೆ. ಪಿ.ಶರ್ಮ ಓಲಿ ಚೀನಾ ಹೇಳಿದಂತೆ ಕೇಳುತ್ತಿದ್ದಾರೆ ಎಂಬ ಆರೋಪವಿದ್ದು, ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಸಹ ಆರಂಭವಾಗಿದೆ. ನೇಪಾದಳ ಸಂಸತ್‌ನಲ್ಲಿ ಭಾರತದ ಪರವಾಗಿ ನಿಲುವು ಪ್ರಕಟಿಸಿದ್ದ ಸಂಸದೆ ಸರಿತಾ ಗಿರಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು. ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಅವರ ಸದಸ್ಯತ್ವ ರದ್ದು ಮಾಡಲಾಗಿದೆ ಎಂಬ ವರದಿಗಳು ಬಂದಿದ್ದವು.
ಸಂಸದೆ ಸರಿತಾ ಗಿರಿ ನೇಪಾಳದ ಹೊಸ ನಕ್ಷೆ ವಿರುದ್ಧವಾಗಿ ಮತವನ್ನು ಚಲಾವಣೆ ಮಾಡಿದ್ದರು. ನೇಪಾಳ ಸೇರಿಸಿದ ಹೊಸ ಪ್ರದೇಶಗಳು ನಮ್ಮದೆಂದು ಹೇಳಲು ದಾಖಲೆಗಳಿಲ್ಲ. ಅದನ್ನು ತಿದ್ದುಪಡಿ ಮಾಡಿ ಹಳೆಯ ನಕ್ಷೆಯನ್ನು ಮುಂದುವರೆಸಬೇಕು ಎಂದು ಸಂಸತ್‌ನಲ್ಲಿ ಆಗ್ರಹಿಸಿದ್ದರು.