ನವದೆಹಲಿ: ಗಂಡ ಹೆಂಡತಿಯ ಜಗಳದಿಂದ 11 ತಿಂಗಳ ಮಗುವೊಂದು ಪ್ರಾಣ ಕಳೆದುಕೊಂಡಿರುವ ಘಟನೆ ದಕ್ಷಿಣ ದೆಹಲಿಯ ಬಳಿ ಇರುವ ಹಳ್ಳಿಯಲ್ಲಿ ನಡೆದಿದೆ.

ಈ ದಂಪತಿಯ 11 ತಿಂಗಳ ಗಂಡು ಮಗುವಿಗೆ ಬಹಳ ಜ್ವರ ಕಾಣಿಸಿಕೊಂಡಿತ್ತು. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮಗುವಿನ ತಾಯಿ ತನ್ನ ಗಂಡನಿಗೆ ಹೇಳಿದ್ದು, ಆದರೆ, ಆತ ಹೆಂಡತಿಯ ಮಾತನ್ನು ನಿರ್ಲಕ್ಷಿಸಿದ್ದನು. ಈ ವೇಳೆ ಗಂಡನ ಮೇಲಿನ ಕೋಪವನ್ನು ಮಗುವಿನ ಮೇಲೆ ತೋರಿಸಿದ ಆಕೆ ನೀನು ನನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ನಾನೇ ಕೊಂದು ಹಾಕುತ್ತೇನೆಂದು ಹೇಳಿ ಮಗುವಿನ ಕುತ್ತಿಗೆಗೆ ತನ್ನ ದುಪ್ಪಟ್ಟಾದಿಂದ ಸುತ್ತಿ ಉಸಿರುಗಟ್ಟಿಸಿ ಮಗುವನ್ನು ಕೊಂದಿದ್ದಾಳೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು.

ಮೃತಪಟ್ಟ ಮಗುವಿನ ತಾಯಿ ಜ್ಯೋತಿ (26) ಹಾಗೂ ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರೆದುರು ತಪೊಪ್ಪಿಕೊಂಡಿರುವ ಜ್ಯೋತಿ, ನನ್ನ ಗಂಡನಿಗೆ ನನ್ನ ಮೇಲೆ ಪ್ರೀತಿ ಇರಲಿಲ್ಲ. ದಿನವೂ ಮನೆಗೆ ಬಂದು ಜಗಳವಾಡುತ್ತಿದ್ದ ನನ್ನ ಮಗುವನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಜ್ಯೋತಿ ಆರೋಪಿಸಿದ್ದಾಳೆ. ಜ್ಯೋತಿಯ ತಂದೆ-ತಾಯಿ ಆ ಮಗುವನ್ನು ಜ್ಯೋತಿಯ ಗಂಡನೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದು, ಈ ಆರೋಪವನ್ನು ಮೃತ ಮಗುವಿನ ತಂದೆ ಅಲ್ಲಗಳೆದಿದ್ದಾನೆ. ಆ ಗ್ರಾಮದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


