


ಬೆಂಗಳೂರು: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡವನ್ನು ಕಾಯ್ದುಕೊಳ್ಳದ ಗ್ರಾಹಕರಿಗೆ ಬ್ಯಾಂಕುಗಳು ವಿಧಿಸುತ್ತಿದ್ದ ದಂಡ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಸಂಸದೀಯ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ, ಈ ಕ್ರಮದ ಹಿಂದೆ ಬೆಂಗಳೂರಿನ ಉದ್ಯಮಿಯೊಬ್ಬರ ಹೋರಾಟ ಕಾರಣವಾಗಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ತಿರುವನಂತಪುರಂ ಮೂಲದ ಪರಮೇಶ್ವರನ್ ಕೃಷ್ಣ ಅಯ್ಯರ್ ಅವರು ಬಿದಿರು ಹಾಗೂ ಇತರ ಸುಸ್ಥಿರ ವಸ್ತುಗಳಿಂದ ಜೀವನಶೈಲಿ ಉತ್ಪನ್ನಗಳನ್ನು ತಯಾರಿಸುವ ‘ಬಂಬೂಪೆಕರ್’ ಸಂಸ್ಥೆಯ ಸ್ಥಾಪಕರು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಸಮುದಾಯದ ಕಾರ್ಮಿಕರು ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರದ ಕಾರಣ ಪದೇಪದೇ ದಂಡ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಅವರು, ಈ ವಿಚಾರದ ವಿರುದ್ಧ ಹೋರಾಟ ಆರಂಭಿಸಿದರು.
“ದಯವಿಟ್ಟು ನಮ್ಮ ಸಂಬಳವನ್ನು ಬ್ಯಾಂಕ್ ಖಾತೆಗಳ ಮೂಲಕವಲ್ಲ, ನಗದು ರೂಪದಲ್ಲಿ ನೀಡಿ” ಎಂದು ಕಾರ್ಮಿಕರು ಮನವಿ ಮಾಡಿದ ಸಂದರ್ಭ ಕಾರಣ ತಿಳಿದು ಅವರಿಗೆ ಆಘಾತವಾಯಿತು. 2008ರಲ್ಲಿ ಬುಡಕಟ್ಟು ಹಾಗೂ ಅಶಿಕ್ಷಿತ ಕಾರ್ಮಿಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಸಂಸ್ಥೆ ಆರಂಭಿಸಿದ್ದ ಅವರು, ಕೋವಿಡ್ ಸಾಂಕ್ರಾಮಿಕಕ್ಕಿಂತ ಹಲವು ವರ್ಷಗಳ ಮೊದಲು ಬ್ಯಾಂಕ್ ಖಾತೆಗಳ ಮೂಲಕವೇ ಸಂಬಳ ಪಾವತಿಸುವ ವ್ಯವಸ್ಥೆ ಮಾಡಿದ್ದರು.
ಸಂಬಳ ಜಮಾ ಆದ ತಕ್ಷಣ ಕಾರ್ಮಿಕರು ಬಹುತೇಕ ಹಣವನ್ನು ಕುಟುಂಬಗಳಿಗೆ ಕಳುಹಿಸುತ್ತಿದ್ದರು. ಇದರ ಪರಿಣಾಮವಾಗಿ ತಿಂಗಳ ಬಹುಪಾಲು ದಿನಗಳು ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಉಳಿಯದೇ ಹೋಗುತ್ತಿತ್ತು. ಮುಂದಿನ ತಿಂಗಳ ಸಂಬಳ ಬಂದಾಗ ಅದರಲ್ಲಿನ ಗಮನಾರ್ಹ ಭಾಗ ದಂಡವಾಗಿ ಕಡಿತಗೊಳ್ಳುತ್ತಿತ್ತು. ತಿಂಗಳಿಗೆ ₹15,000 ರಿಂದ ₹20,000 ಗಳಿಸುವ ಕಾರ್ಮಿಕರಿಗೆ ₹1,000ರಷ್ಟು ದಂಡ ಭಾರೀ ಹೊರೆ ಆಗುತ್ತಿತ್ತು ಎಂದು ಪರಮೇಶ್ವರನ್ ತಿಳಿಸಿದ್ದಾರೆ.
ಈ ಪದ್ಧತಿಯನ್ನು ತೀವ್ರ ಅನ್ಯಾಯಕರವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ವೈಯಕ್ತಿಕ ಸಾಲಗಳಿಗೆ ಬ್ಯಾಂಕುಗಳು ಶೇಕಡಾ 4ರಿಂದ 7ರವರೆಗೆ ಬಡ್ಡಿ ವಿಧಿಸುತ್ತವೆ. ಆದರೆ ಕನಿಷ್ಠ ಬ್ಯಾಲೆನ್ಸ್ ಕೊರತೆಗೆ ₹800ರಿಂದ ₹1,000ವರೆಗೆ ದಂಡ ಕಡಿತಗೊಳಿಸುತ್ತವೆ. ಇದು ಒಂದು ತಿಂಗಳ ಅವಧಿಯಲ್ಲಿ ಶೇಕಡಾ 100ಕ್ಕಿಂತ ಹೆಚ್ಚು ಹೊರೆ ಆಗುತ್ತದೆ” ಎಂದು ಅವರು ಟೀಕಿಸಿದ್ದಾರೆ.
ಷೇರು ಮಾರುಕಟ್ಟೆಯ ಮಾಜಿ ಉದ್ಯೋಗಿಯಾಗಿದ್ದ ಪರಮೇಶ್ವರನ್ ಕೇವಲ ದೂರು ನೀಡುವುದರಿಂದ ಪ್ರಯೋಜನವಿಲ್ಲ ಎಂದು ತಿಳಿದು, ಸಮಗ್ರ ಅಧ್ಯಯನದ ಬಳಿಕ ಕನಿಷ್ಠ ಬ್ಯಾಲೆನ್ಸ್ ದಂಡದ ಆರ್ಥಿಕ ಹೊರೆ ಕುರಿತು ವಿವರವಾದ ಪ್ರಾತಿನಿಧ್ಯ ಸಿದ್ಧಪಡಿಸಿ 2024ರ ಏಪ್ರಿಲ್‌ನಲ್ಲಿ ಲೋಕಸಭಾ ಸ್ಪೀಕರ್‌ಗೆ ಸಲ್ಲಿಸಿದರು. “ದೂರು ಸ್ವೀಕೃತಿಯ ದೃಢೀಕರಣವೂ ಸಿಗಲಿಲ್ಲ. ಆದರೆ ಧ್ವನಿ ಇಲ್ಲದ ಜನರ ಪರವಾಗಿ ಏನಾದರೂ ಮಾಡಿದ್ದೇನೆ ಎಂಬ ತೃಪ್ತಿ ಇತ್ತು” ಎಂದು ಅವರು ಹೇಳಿದ್ದಾರೆ.
ಈ ದೂರವನ್ನು ಲೋಕಸಭಾ ಅರ್ಜಿ ಸಮಿತಿಯು ಪರಿಗಣಿಸಿತು. ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2024–25ನೇ ಹಣಕಾಸು ವರ್ಷದಲ್ಲೇ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ದಂಡದ ಮೂಲಕ ₹4,817.9 ಕೋಟಿ ಸಂಗ್ರಹಿಸಿವೆ. 2020ರಿಂದ 2025ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ₹11,535.99 ಕೋಟಿ ಸಂಗ್ರಹಿಸಿದ್ದು, ಖಾಸಗಿ ಬ್ಯಾಂಕುಗಳು 2024–25ರಲ್ಲಿ ಮಾತ್ರ ₹2,772.2 ಕೋಟಿ ದಂಡ ವಸೂಲಿ ಮಾಡಿವೆ.
ಆರ್‌ಬಿಐ ಮಾರ್ಗಸೂಚಿಗಳು
ಆಗಸ್ಟ್ 2015ರಿಂದ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಖಾತೆಗಳಿಗೆ ದಂಡ ವಿಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಮಾರ್ಗಸೂಚಿಗಳ ಪ್ರಕಾರ ದಂಡವು ನಿಜವಾದ ಬ್ಯಾಲೆನ್ಸ್ ಮತ್ತು ಕನಿಷ್ಠ ಬ್ಯಾಲೆನ್ಸ್ ನಡುವಿನ ಕೊರತೆಯ ಸ್ಥಿರ ಶೇಕಡಾವಾರು ಆಗಿರಬೇಕು. ಭೌಗೋಳಿಕ ಪ್ರದೇಶ ಹಾಗೂ ಗ್ರಾಹಕ ವರ್ಗದ ಆಧಾರದ ಮೇಲೆ ಸ್ಲ್ಯಾಬ್‌ವಾರು ಶುಲ್ಕ ವಿಧಿಸಬಹುದು. ಖಾತೆ ತೆರೆಯುವಾಗಲೇ ಗ್ರಾಹಕರಿಗೆ ಕನಿಷ್ಠ ಬ್ಯಾಲೆನ್ಸ್ ಮಾಹಿತಿ ನೀಡಬೇಕು ಹಾಗೂ ಬದಲಾವಣೆಗಳನ್ನೂ ತಿಳಿಸಬೇಕು. ಮುಂಚಿತ ಸೂಚನೆ ನೀಡಿ ಒಂದು ತಿಂಗಳೊಳಗೆ ಬ್ಯಾಲೆನ್ಸ್ ತುಂಬದಿದ್ದರೆ ಮಾತ್ರ ದಂಡ ವಿಧಿಸಬೇಕು. ದಂಡದಿಂದ ಖಾತೆ ಮೈನಸ್ ಬ್ಯಾಲೆನ್ಸ್‌ಗೆ ಜಾರಬಾರದು ಎಂಬುದೂ ನಿಯಮವಾಗಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಸಂಸದೀಯ ಸಮಿತಿಯು, ವಿಶೇಷವಾಗಿ ಮೂಲ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವುದನ್ನು ನಿಲ್ಲಿಸುವ ಏಕರೂಪ ನೀತಿ ಅಳವಡಿಸಬೇಕೆಂದು ಶಿಫಾರಸು ಮಾಡಿದೆ. ಹೆಚ್ಚಿನ ಬ್ಯಾಲೆನ್ಸ್‌ಗಳಿಗೆ ರಿವಾರ್ಡ್ ಪಾಯಿಂಟ್‌ಗಳು, ಶುಲ್ಕ ವಿನಾಯಿತಿ ಹಾಗೂ ಹೆಚ್ಚುವರಿ ಬಡ್ಡಿದರದಂತಹ ಪ್ರೋತ್ಸಾಹ ನೀಡಬಹುದು ಎಂದು ಸೂಚಿಸಿದೆ. ಸಹಕಾರಿ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೂ ಅಗತ್ಯ ಮಾರ್ಗಸೂಚಿ ನೀಡುವಂತೆ ಹಣಕಾಸು ಸೇವೆಗಳ ಇಲಾಖೆ ಹಾಗೂ ಆರ್‌ಬಿಐಗೆ ಮನವಿ ಮಾಡಲಾಗಿದೆ.
ಶಿಫಾರಸು ಸಾರ್ವಜನಿಕವಾದ ಬಳಿಕ ಪರಮೇಶ್ವರನ್ ತಮ್ಮ ಪ್ರಯತ್ನದ ಪರಿಣಾಮ ಅರಿತು ಸಂತಸಪಟ್ಟಿದ್ದಾರೆ. “ನಮ್ಮಂತಹ ಸಾಮಾನ್ಯ ಜನರೂ ಬದಲಾವಣೆ ತರಬಹುದು ಎಂಬುದಕ್ಕೆ ಇದು ಸಾಕ್ಷಿ” ಎಂದು ಅವರು ಹೇಳಿದ್ದಾರೆ.
ತಿರುವನಂತಪುರದ ವಲಿಯಸಲೈ ಮೂಲದ ಪರಮೇಶ್ವರನ್ 2008ರವರೆಗೆ ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡಿದರು. ಬಳಿಕ ಬೆಂಗಳೂರಿಗೆ ಬಂದು ಇದೇ ಕ್ಷೇತ್ರದಲ್ಲಿ ಮುಂದುವರಿದ ಅವರು, ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದು ಬಿದಿರು ಆಧಾರಿತ ಉದ್ಯಮ ಆರಂಭಿಸುವ ಆಶಯ ವ್ಯಕ್ತಪಡಿಸಿದ್ದರು. ಕಲಾಂ ಅವರ ಪ್ರೋತ್ಸಾಹವೇ ‘ಬಂಬೂಪೆಕರ್’ ಸ್ಥಾಪನೆಗೆ ಪ್ರೇರಣೆಯಾಯಿತು.
2009ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಇಂದು ಬಿದಿರು ಆಧಾರಿತ ಉತ್ಪನ್ನಗಳಲ್ಲಿ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಬುಡಕಟ್ಟು ಸಮುದಾಯದ ಕಾರ್ಮಿಕರಿಗೆ ತರಬೇತಿ ನೀಡಿ ನ್ಯಾಯಸಮ್ಮತ ಹಾಗೂ ಸುಸ್ಥಿರ ವೇತನ ವ್ಯವಸ್ಥೆ ಒದಗಿಸುವುದು ಇದರ ಉದ್ದೇಶ. ಪೀಠೋಪಕರಣ, ಲೈಫ್ ಸ್ಟೈಲ್ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ, ನೈಸರ್ಗಿಕ ವಸ್ತುಗಳ ಸಂಯೋಜನೆಯಿಂದ ವಿವಿಧ ರಚನೆಗಳ ನಿರ್ಮಾಣದಲ್ಲೂ ಪರಿಣತಿ ಹೊಂದಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಎರಡು ಘಟಕಗಳನ್ನು ನಿರ್ವಹಿಸುತ್ತಿರುವ ಬಂಬೂಪೆಕರ್, ಈಶಾನ್ಯ ರಾಜ್ಯಗಳು, ಛತ್ತೀಸ್‌ಗಢ ಹಾಗೂ ತಿರುವನಂತಪುರಕ್ಕೆ ವಿಸ್ತರಣೆ ಮಾಡುವ ಯೋಜನೆ ಹೊಂದಿದೆ. “ಮುಂದಿನ ಮೂರು ವರ್ಷಗಳ ಆರ್ಡರ್ ಗಳಿವೆ. ಪೂರೈಕೆ ಸೀಮಿತವಾದರೂ ಬೇಡಿಕೆ ಹೆಚ್ಚಿದೆ” ಎಂದು ಪರಮೇಶ್ವರನ್ ತಿಳಿಸಿದ್ದಾರೆ.








