

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಅರ್ಜಿಯನ್ನು ವಜಾ ಮಾಡಿದೆ.
ಸೆಮಿಫೈನಲ್ವರೆಗೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಗೆದ್ದಿದ್ದ ವಿನೇಶ್, ಫೈನಲ್ಗೆ ಲಗ್ಗೆ ಇಟ್ಟಿದ್ದರು. ಆದರೆ ಕೇವಲ 100 ಗ್ರಾಂ ತೂಕ ಹೆಚ್ಚಾಗಿರೋದ್ರಿಂದ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು. ಫೈನಲ್ನಲ್ಲಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ಗೆ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಜಾಗೊಳಿಸಲಾಗಿದೆ. ಆ ಮೂಲಕ ವಿನೇಶ್ ಫೋಗಟ್ ಬೆಳ್ಳಿ ಪದಕದ ಕನಸು ಭಗ್ನವಾಗಿದೆ.
ಆಗಸ್ಟ್ 7 ರಂದು ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಸಿಎಎಸ್ ಒಪ್ಪಿಕೊಂಡಿತ್ತು. ಭಾರತ ಸರ್ಕಾರವು ಹಿರಿಯ ವಕೀಲರಾದ ವಿದುಷ್ಕೃತ್ ಸಿಂಘಾನಿಯಾ ಮತ್ತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವ ಅವರನ್ನು ವಿನೇಶ್ ಪರ ವಾದಿಸಲು ನೇಮಿಸಿತ್ತು. ತೀರ್ಪು ಮೊದಲು ಆಗಸ್ಟ್ 9 ರಂದು ಬರಬೇಕಿತ್ತು. ನಂತರ ಅದು ಆಗಸ್ಟ್ 11 ಕ್ಕೆ ಮತ್ತು ನಂತರ ಆಗಸ್ಟ್ 13 ಕ್ಕೆ ಮುಂದೂಡಿಕೆಯಾಗಿತ್ತು.. ನಂತರದ ದಿನಾಂಕದಲ್ಲಿ, ತೀರ್ಪಿನ ದಿನಾಂಕವನ್ನು ಮೂರನೇ ಬಾರಿಗೆ ಆಗಸ್ಟ್ 16 ಕ್ಕೆ ಮುಂದೂಡಲಾಯಿತು. ಆದರೆ, CAS ತಮ್ಮ ನಿಗದಿತ ಗಡುವಿನ ಮೊದಲೇ ಈ ತೀರ್ಪನ್ನು ಘೋಷಿಸಿತು.