Thursday, March 28, 2024
spot_imgspot_img
spot_imgspot_img

ರಾಜ್ಯದ ಐವರು ಸಾಧಕರಿಗೆ ಪ್ರತಿಷ್ಠಿತ “ಪದ್ಮ ಪ್ರಶಸ್ತಿ”

- Advertisement -G L Acharya panikkar
- Advertisement -

ಬೆಂಗಳೂರು: ಡಾ.ಬಿ.ಎಂ. ಹೆಗ್ಡೆಪದ್ಮ ವಿಭೂಷಣ : ಖ್ಯಾತ ಹೃದ್ರೋಗ ತಜ್ಞರಾದ ಡಾ. ಬಿ.ಎಂ ಹೆಗ್ಡೆ (ಬೆಳ್ಳಿ ಮೋನಪ್ಪ ಹೆಗ್ಡೆ )ಯವರು ಈ ಬಾರಿಯ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಉಡುಪಿ ಮೂಲದ ಇವರು ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಬರಹಗಾರರಾಗಿಯೂ ಭಾರಿ ಜನಪ್ರಿಯರು. ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಇವರು 1999ರಲ್ಲಿ ಪ್ರತಿಷ್ಠಿತ ಬಿ.ಸಿ. ರಾಯ್‌ ಪ್ರಶಸ್ತಿ ಪಡೆದುಕೊಂಡಿದ್ದರು. 2010ರಲ್ಲಿ ಅವರಿಗೆ ಪದ್ಮ ಭೂಷಣ ಪುರಸ್ಕಾರ ನೀಡಿ ಭಾರತ ಸರಕಾರ ಸಮ್ಮಾನಿಸಿತ್ತು.

ಚಂದ್ರಶೇಖರ ಕಂಬಾರ – ಪದ್ಮ ಭೂಷಣ: ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರಕಾರ ಅವರನ್ನು ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರರಾಗಿ ಜನಪ್ರಿಯರಾಗಿರುವ ಇವರು ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರಾಗಿ, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಹಾಗೂ ಹಂಪಿ ಕನ್ನಡ ವಿವಿಯ ಮೊದಲ ಉಪಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಂಜಮ್ಮ ಜೋಗತಿ – ಪದ್ಮಶ್ರೀ: ಹಾಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿರುವ ಮಂಜಮ್ಮ ಜೋಗತಿ ಅವರದ್ದು ನಿಜಕ್ಕೂ ಒಂದು ಸ್ಪೂರ್ತಿದಾಯಕ ಕತೆ. ತೃತೀಯ ಲಿಂಗಿಯಾಗಿ ಗುರುತಿಸಿಕೊಂಡ ಇವರು ಕೌಟುಂಬಿಕ ಬಹಿಷ್ಕಾರದ ನಡುವೆಯೂ ಬದುಕು ಕಟ್ಟಿಕೊಂಡ ಸಾಹಸಿ. ಬಹಿಷ್ಕಾರಕ್ಕೆ ಒಳಗಾಗಿದ್ದ ವೇಳೆ ಆಯ್ಕೆ ಮಾಡಿಕೊಂಡಿದ್ದ ‘ಜೋಗತಿ’ ವೃತ್ತಿಯನ್ನೇ ಬದುಕಾಗಿಸಿಕೊಂಡು ಸಾಧನೆ ಮೆರೆದವರು.

ಬಳ್ಳಾರಿ ಮೂಲದ ಇವರು 18ನೇ ವಯಸ್ಸಿಗೆ ಕಲಾಸೇವೆ ಆರಂಭಿಸಿ ಇವತ್ತಿಗೂ ನಿಂತಿಲ್ಲ. ‘ಜೋಗತಿ’ ಎಂಬ ವಿಶಿಷ್ಠ ಕಲಾ ಪ್ರಕಾರವನ್ನು ಜೀವಂತವಾಗಿಟ್ಟಿರುವುದಲ್ಲದೆ ಅದಕ್ಕೆ ಹೊಸ ಮೆರುಗು ನೀಡಿದ ಹೆಗ್ಗಳಿಕೆ ಇವರದ್ದು.

ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್‌ – ಪದ್ಮಶ್ರೀ : ಅನ್ವಯಿಕ ಗಣಿತಜ್ಞ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪ್ರಾಧ್ಯಾಪಕರಾಗಿರುವ ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್‌ ಈ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಹೋ-ಕಶ್ಯಪ್‌ ಸೂತ್ರವನ್ನು ಅಭಿವೃದ್ಧಿಗೊಳಿಸಿದ ಇವರು ಅಮೆರಿಕದ ಪರ್ಡು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಕೆವೈ ವೆಂಕಟೇಶ್‌ – ಪದ್ಮಶ್ರೀ : ಕುಬ್ಜ ದೇಹದವರಿಗಾಗಿಯೇ ವಿಶ್ವದಲ್ಲಿ ಕ್ರೀಡಾಕೂಟಗಳು ನಡೆಯುತ್ತವೆ. ಇದರಲ್ಲಿ ಇವರದ್ದು ಅನುಪಮ ಸಾಧನೆ. 2005ರಲ್ಲಿ ನಡೆದ ವರ್ಲ್ಡ್‌ ಡ್ವಾರ್ಫ್‌ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಭಾರತವನ್ನು ಇವರು ಪ್ರತಿನಿಧಿಸಿದ್ದರು. ಭಾರತೀಯರೊಬ್ಬರು ಇದರಲ್ಲಿ ಭಾಗವಹಿಸಿದ್ದೂ ಅದೇ ಮೊದಲು. ಮೊದಲ ಯತ್ನದಲ್ಲೇ ಇವರು ಗರಿಷ್ಠ ಪದಕ ಬಾಚಿಕೊಂಡಿದ್ದರು. ಎರಡು ಚಿನ್ನ, ಒಂದು ಬೆಳ್ಳಿ, ಮೂರು ಕಂಚಿನ ಪದಕ ಇವರದಾಗಿತ್ತು. ಇದು ಲಿಮ್ಕಾ ದಾಖಲೆಯೂ ಹೌದು.

ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಹಾಕಿ, ಫೂಟ್‌ಬಾಲ್‌, ಶಾಟ್‌ಪುಟ್‌ ಮತ್ತು ವಾಲಿಬಾಲ್‌ನಲ್ಲಿ ಪರಿಣತರಾಗಿರುವ ಇವರು ಹಲವು ಕ್ರೀಡಾಕೂಟಗಳಲ್ಲಿ ಪದಕಗಳನ್ನು ಬಾಚಿಕೊಂಡಿದ್ದಾರೆ.

- Advertisement -

Related news

error: Content is protected !!