Thursday, April 25, 2024
spot_imgspot_img
spot_imgspot_img

ಕಾಂಗ್ರೆಸ್ ನ ಒಂದೊಂದು ಮತವು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ- ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಯು.ಟಿ ಖಾದರ್ ಹೇಳಿಕೆ

- Advertisement -G L Acharya panikkar
- Advertisement -

ವಿಟ್ಲ: ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರರು ನೀಡುವ ಪ್ರತಿಯೊಂದು ಮತವೂ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಲಿದ್ದಾರೆ ಎಂದು ಮಂಗಳೂರು ಶಾಸಕ ಯು.ಟಿ ಖಾದರ್ ತಿಳಿಸಿದರು.


ಅವರು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಸರ್ಕಾರ ಕಳೆದ ಎರಡು ವರ್ಷದಲ್ಲಿ ಬಡವರಿಗೆ ಪ್ರಯೋಜಕಾರಿಯಾಗುವ ಯಾವುದೇ ಕಾರ್ಯಕ್ರಮ ನಡೆಸಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಹಲವು ಜನಪರ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. ರೇಶನ್ ಕಾರ್ಡ್ ವಿತರಣೆಯಾಗಿಲ್ಲ. ಮನೆ ಹಸ್ತಾಂತರ ಮಾಡಿಲ್ಲ. ಪಿಂಚಣಿ ಕೂಡಾ ಬಡವರಿಗೆ ದೊರೆಯುತ್ತಿಲ್ಲ. ಮರಾಠಿ ನಿಗಮ ಸ್ಥಾಪಿಸಲು ನಮ್ಮ ವಿರೋಧವಿಲ್ಲ.

ಆದರೆ ಗಡಿಭಾಗದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದಾದ ಬಳಿಕ ನಿಗಮ ಮಂಡಳಿ ಸ್ಥಾಪನೆ ಮಾಡಲಿ ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದಿಂದ ಬ್ಯಾಂಕ್‌ಗಳ ವಿಲೀನವಾಗಿದೆ. ಪೆಟ್ರೋಲ್, ಅಡುಗೆ ಅನಿಲ ದರ, ದಿನಸಿ ಮೊದಲಾದ ದರಗಳು ಗಗನಕ್ಕೇರಿದೆ. ಕೃಷಿ ಮಸೂದೆ ಮೂಲಕ ದೇಶದ ಬೆನ್ನುಲುಬು ರೈತರನ್ನು ಬೀದಿಪಾಲು ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಅದಾನಿ, ಅಂಬಾನಿ ಅವರ ಆಸ್ತಿ ಹೆಚ್ಚಳವಾಗಿದೆ ಎಂದು ಹೇಳಿದರು.


ವಿಧಾನ ಪರಷತ್ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಪಕ್ಷ ಎಂದಿಗೂ ಗೂಂಡಾ ಪ್ರವೃತ್ತಿ ಮಾಡಿಲ್ಲ. ಇನ್ನೂ ಮಾಡುವುದಿಲ್ಲ. ಅದು ನಮ್ಮ ಸಂಸ್ಕೃತಿಯಲ್ಲ. ಕಾಂಗ್ರೆಸ್ ಆಡಳಿತ ಇದ್ದಾಗ ನಡೆಯದ ಘಟನೆ ಬಿಜೆಪಿ ಸರ್ಕಾರ ಆಡಳಿತ ಇರುವಾಗ ನಡೆದಿದೆ. ಬಿಜೆಪಿ ಆಡಳಿತದಲ್ಲಿ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ನಳಿನ್ ಕುಮಾರ್ ಕಟೀಲಿಗೆ ಕನಸಿನಲ್ಲೂ ಕಾಂಗ್ರೆಸ್ ಹೆಸರು ಬರುತ್ತಿದೆ. ಯಾವುದೇ ಘಟನೆ ನಡೆದಾಗ ಕಾಂಗ್ರೆಸ್ ಪಕ್ಷವನ್ನು ದೂರುವುದು ನಳಿನ್‌ಗೆ ಮಾಮೂಲಾಗಿದೆ ಎಂದರು.

ಈಗಾಗಲೇ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರಿಗೆ ಅಲ್ಲಿ ತ್ರೀಶಂಕು ಸ್ಥಿತಿ ನಿರ್ಮಾಣಗೊಂಡು ಮತ್ತೆ ನಮ್ಮ ಪಕ್ಷಕ್ಕೆ ಮರಳಲಿದ್ದಾರೆ ಎಂದರು.


ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಸಲೀಂ, ಗಿರೀಶ್ ಶೆಟ್ಟಿ, ಲತೀಫ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ವಿವಿಧ ವಲಯ ಕಾಂಗ್ರೆಸ್ ಅಧ್ಯಕ್ಷರು ಉಪಸ್ಥಿತರಿದ್ದರು.

- Advertisement -

Related news

error: Content is protected !!