Thursday, November 26, 2026
spot_imgspot_img
spot_imgspot_img

ಹಾರಾಟದ ವೇಳೆ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ: ಫೀನಿಕ್ಸ್‌ನಲ್ಲಿ ತುರ್ತು ಭೂಸ್ಪರ್ಶ

- Advertisement -
- Advertisement -

ವಾಷಿಂಗ್ಟನ್: ಅಮೆರಿಕದಿಂದ ಚಿಕಾಗೋಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದ ಹಾರಾಟದ ವೇಳೆ ಪ್ರಯಾಣಿಕನೊಬ್ಬ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಪರಿಣಾಮ ವಿಮಾನವನ್ನು ಅರಿಜೋನಾದ ಫೀನಿಕ್ಸ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ.

ಸ್ಯಾನ್ ಡಿಯಾಗೋದಿಂದ ಹೊರಟಿದ್ದ ಅಮೆರಿಕನ್ ಏರ್‌ಲೈನ್ಸ್‌ನ ಫ್ಲೈಟ್ AA1494 ವಿಮಾನದಲ್ಲಿ ಈ ಘಟನೆ ನಡೆದಿದೆ. ಅನುಚಿತವಾಗಿ ವರ್ತಿಸಿದ ಪ್ರಯಾಣಿಕನಿಂದಾಗಿ ವಿಮಾನವನ್ನು ಫೀನಿಕ್ಸ್ ಸ್ಕೈ ಹಾರ್ಬರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ ಎಂದು ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ.

ಫೀನಿಕ್ಸ್ ಪೊಲೀಸರ ಪ್ರಕಾರ, ಪ್ರಯಾಣಿಕನೊಬ್ಬ ತನ್ನ ನಿಗದಿತ ಆಸನದಿಂದ ಎದ್ದು ವಿಮಾನದ ಮುಂಭಾಗಕ್ಕೆ ತೆರಳಿದ್ದಾನೆ. ತನ್ನ ಆಸನಕ್ಕೆ ಹಿಂತಿರುಗುವಂತೆ ವಿಮಾನ ಸಿಬ್ಬಂದಿ ಸೂಚಿಸಿದರೂ ಅದನ್ನು ನಿರಾಕರಿಸಿದ್ದಾನೆ. ಬಳಿಕ ವಿಮಾನದ ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದು, ಈ ವೇಳೆ ವಿಮಾನ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಸೇರಿ ಆತನನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಎಲ್ಲರೂ ಸೇರಿ ಆತನನ್ನು ನೆಲಕ್ಕೆ ಕೆಡವಿ ಹಿಡಿದಿದ್ದಾರೆ. ಬಳಿಕ ವಿಮಾನ ಮುಂಜಾನೆ ಸುಮಾರು 1 ಗಂಟೆಗೆ ಫೀನಿಕ್ಸ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಈ ಘಟನೆಯಲ್ಲಿ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇತರ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ ಬಳಿಕ ವಿಮಾನವು ತನ್ನ ಪ್ರಯಾಣವನ್ನು ಮುಂದುವರಿಸಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್‌ಎಎ) ಮತ್ತು ಅಮೆರಿಕನ್ ಏರ್‌ಲೈನ್ಸ್ ಈ ಮಾಹಿತಿಯನ್ನು ದೃಢಪಡಿಸಿವೆ.

ವಿಮಾನ ಲ್ಯಾಂಡ್ ಆದ ಬಳಿಕ ಕಾನೂನು ಜಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಲು ನೆರವಾಗಿದ್ದಾರೆ ಎಂದು ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕನನ್ನು ಬಂಧಿಸಿಲ್ಲ. ಆದರೆ, ಎಫ್‌ಬಿಐಗೆ ಮಾಹಿತಿ ನೀಡಲಾಗಿದ್ದು, ಘಟನೆಯ ಕುರಿತು ತನಿಖೆ ಮುಂದುವರಿದಿದೆ ಫೀನಿಕ್ಸ್ ಪೊಲೀಸರು ತಿಳಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!