



ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ಆರೋಪ ಹಿನ್ನೆಲೆ ಶ್ವೇತಭವನದ ಸಮೀಪ ಶಸ್ತ್ರಾಸ್ತ್ರಗಳೊಂದಿಗೆ ವೆನೆಜುವೆಲಾ ಪ್ರಜೆಯೋರ್ವನನ್ನು ಸೀಕ್ರೆಟ್ ಸರ್ವಿಸ್ ಅಧಿಕಾರಿಗಳುಬಂಧಿಸಿದ್ದಾರೆ.
ನ. 5 ರ ತಡರಾತ್ರಿ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಶ್ವೇತಭವನದ ಸುತ್ತಮುತ್ತ ಗಸ್ತು ತಿರುಗುತ್ತಿದ್ದ ವೇಳೆ ಕಾನ್‌ಸ್ಟಿಟ್ಯೂಷನ್ ಅವೆನ್ಯೂ ಬಳಿ ನೀಲಿ ಬಣ್ಣದ ಫೋರ್ಡ್ ಎಫ್-150 ಪಿಕಪ್ ಟ್ರಕ್ ಅನುಮಾನಾಸ್ಪದವಾಗಿ ನಿಂತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅಧಿಕಾರಿಗಳು ವಾಹನದ ಬಳಿ ತೆರಳಿ ಒಳಗಿದ್ದ ವ್ಯಕ್ತಿಯ ಸುರಕ್ಷತೆ ಹಾಗೂ ಆತನ ಬಳಿ ಶಸ್ತ್ರಾಸ್ತ್ರಗಳಿವೆಯೇ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ವಾಹನದಲ್ಲಿ ಮೂರು ಬಂದೂಕುಗಳು ಹಾಗೂ ಅಪಾರ ಪ್ರಮಾಣದ ಗುಂಡುಗಳು ಪತ್ತೆಯಾಗಿದೆ. ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವಂತೆ ತಲೆಯೊಳಗಿನ ಧ್ವನಿಗಳು ಸೂಚನೆ ನೀಡಿದ್ದವು ಎಂದು ಆರೋಪಿ ತಿಳಿಸಿದ್ದಾನೆ.
ಅಧಿಕಾರಿಗಳು ಬಂದೂಕುಗಳಿವೆಯೇ ಎಂದು ಪ್ರಶ್ನಿಸಿದಾಗ ಆರೋಪಿಯು ತಲೆಯಾಡಿಸಿ ಒಪ್ಪಿಕೊಂಡಿದ್ದಾನೆ. ಬಳಿಕ ಬೆರಳಿನಿಂದ ಬಂದೂಕಿನ ಸನ್ನೆಯನ್ನೂ ಮಾಡಿ, ನಂತರ ವಾಹನದಿಂದ ಕೆಳಗಿಳಿದ ಆತನನ್ನು ಗೂಗಲ್ ಟ್ರಾನ್ಸ್‌ಲೇಟ್ ಸಹಾಯದಿಂದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.







