


ಮಾದಕ ವಸ್ತುಗಳನ್ನು ಮಾರಾಟ/ಸಾಗಾಟ ಮಾಡುವವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ವರ್ಷ 40 ಪ್ರಕರಣಗಳು ದಾಖಲಾಗಿದ್ದು, 67 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಆರೋಪಿಗಳಿಂದ 1,36,35,650 ರೂ. ಬೆಲೆಯ 145ಕೆ.ಜಿ 324 ಗ್ರಾಂ, 319.976 ಗ್ರಾಂ ಎಂಡಿಎಂಎ, 13 ಗ್ರಾಂ ಎಂಡಿಎಂಎ Pills, 756.52 Hydro weed ganja ಹಾಗೂ ಇತರ ವಿವಿಧ ಮಾದಕ ಸೊತ್ತುಗಳನ್ನು ವಶಪಡಿಸಲಾಗಿದೆ. ಜನವರಿ 15ರಂದು 6,80,86,558 ರೂ. ಮೌಲ್ಯದ 335 ಕೆ. ಜಿ 460 ಗ್ರಾಂ ಗಾಂಜಾ, 7 ಕೆಜಿ 640 ಗ್ರಾಂ ಎಂಡಿಎಂಎ ಮತ್ತು 16 Gms Cocaine ಮಾದಕ ವಸ್ತುಗಳನ್ನು ನಾಶ ಮಾಡಲಾಗಿತ್ತು.ಮಂಗಳೂರು ನಗರ ವ್ಯಾಪ್ತಿಯ 9 ಠಾಣೆಗಳ 23 ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 21 ಕೆಜಿ 320 ಗ್ರಾಂ ಗಾಂಜಾ ಮತ್ತು 60 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ಗುರುವಾರ ಸುಟ್ಟು ನಾಶ ಪಡಿಸಲಾಯಿತು.
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ/ಸಾಗಾಟ ಹಾಗೂ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸಿ ಅಪರಾಧಗಳನ್ನು ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಮಾದಕ ವಸ್ತು ಸೇವನೆಯ ಕುರಿತು ಈ ವರ್ಷ 376 ಜನರ ವಿರುದ್ಧ 335 ಪ್ರಕರಣಗಳನ್ನು ದಾಖಲಿಸಲಾಗಿದೆ.