ವಿಟ್ಲ: ಮೆಸ್ಕಾಂ ಗುತ್ತಿಗೆ ಮಾಪಕ ಓದುಗರು(ಮೀಟರ್ ರೀಡರ್ಸ್ ಗಳು) ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಈಗಾಗಲೇ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದುವರೆಗೂ ಯಾವುದೇ ರೀತಿಯ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನಾಳೆ ಜುಲೈ 9 ರಂದು ಬಂಟ್ವಾಳ ಮೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು.

ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ಸುತ್ತೋಲೆಯ ಪ್ರಕಾರ ಲಾಕ್ ಡೌನ್ ಜಾರಿಯ ಸಮಯದಲ್ಲಿ ಮೀಟರ್ ರೀಡರ್ಸ್ ಗಳ ತಡೆ ಹಿಡಿದ ವೇತನವನ್ನು ತಕ್ಷಣವೇ ನೀಡಬೇಕು. ಹೊಸ ಟೆಂಡರ್ ಕೊಡುವ ಸಮಯದಲ್ಲಿ ಈಗ ಇರುವ ವೇತನಕ್ಕಿಂತ ಹೆಚ್ಚು ವೇತನ ನೀಡುವ ನಿಯಮವಿದೆ. ಆದರೆ ಮೆಸ್ಕಾಂ ಇಲಾಖೆ ಹೊಸ ಟೆಂಡರ್ ಕೊಡುವಾಗ ಕಡಿಮೆ ದರಕ್ಕೆ ಟೆಂಡರ್ ಕೊಟ್ಟು ಗುತ್ತಿಗೆ ಮಾಪಕ ಓದುಗರನ್ನು ಜೀತಪದ್ಧತಿಯಂತೆ ದುಡಿಸುವ ಹುನ್ನಾರ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಈಗ ದುಡಿಯುತ್ತಿರುವ ಗುತ್ತಿಗೆ ಮಾಪಕ ಓದುಗರನ್ನು ಕೆಲಸದಿಂದ ತೆಗೆಯದಂತೆ ಕ್ರಮ ವಹಿಸಬೇಕು ಮೊದಲಾದ ಬೇಡಿಕೆಗಳನ್ನು ಸಚಿವರಿಗೆ, ಶಾಸಕರಿಗೆ ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಈಗಾಗಲೇ ಮಾಪಕ ಓದುಗರನ್ನು ಕೆಲಸದಿಂದ ತೆಗೆದು ಹಾಕುವ ಹುನ್ನಾರ ನಡೆಯುತ್ತಿದ್ದು, ಅದು ನಡೆದರೆ ಇಡೀ ಮಾಪಕ ಓದುಗರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಪಕ ಓದುಗರು ಹೇಳುತ್ತಿದ್ದಾರೆ ಇದಕ್ಕೆ ಮೆಸ್ಕಾಂ ಇಲಾಖೆ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು, ಸದಸ್ಯ ಭಾಸ್ಕರ್ ಮಲ್ಲಿಕಟ್ಟೆ ಉಪಸ್ಥಿತರಿದ್ದರು.