

ಬೆಂಗಳೂರು: ಯಾದಗಿರಿಯ ಪಿಎಸ್ ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಆತನ ಪುತ್ರ ಪಂಪನಗೌಡ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಘಟನೆ ನಡೆದ 17 ಗಂಟೆ ಬಳಿಕ ಕೇಸ್ ದಾಖಲಾಗಿದೆ. ಮೃತ ಪಿಎಸ್ಐ ಪತ್ನಿ ಶ್ವೇತಾ ಕೊಟ್ಟ ದೂರಿನನ್ವಯ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಎನ್ಎಸ್ ಸೆಕ್ಷನ್ 108 ಅಡಿ ಪ್ರಕರಣ ದಾಖಲಾಗಿದ್ದು, ಕೇಸ್ನಲ್ಲಿ ಎ1 ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಪುತ್ರ ಪಂಪನಗೌಡ ಹೆಸರು ಉಲ್ಲೇಖಿಸಲಾಗಿದೆ. ಸತತ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ, ಕೊನೆಗೂ ಎಫ್ಐಆರ್ ದಾಖಲಿಸಿಕೊಂಡಿದೆ.
ಪಿಎಸ್ಐ ಪರಶುರಾಮ ಸಾವು ಪ್ರಕರಣದಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪಣ್ಣಗೌಡ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೇಸ್ ದಾಖಲಾಗಿದ್ದರಿಂದ ಅಪ್ಪ-ಮಗ ತಲೆ ಮರೆಸಿಕೊಂಡಿದ್ದು, ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಏನಿದು ಪ್ರಕರಣ?
ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ಶುಕ್ರವಾರ(ಆ.2) ನಿಧನರಾಗಿದ್ದರು. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಪೊಲೀಸ್ ಕ್ವಾರ್ಟರ್ಸ್ ನಿವಾಸದಲ್ಲಿ ಶುಕ್ರವಾರ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದರು.
ಪತಿ ಯಾದಗಿರಿ ಠಾಣೆಯಲ್ಲಿಯೇ ಮುಂದುವರಿಯಲು ತಂದೆ-ಮಗ 30 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು ಎಂದು ಅವರು ಆರೋಪಿಸಿದ್ದಾರೆ. ಪರಶುರಾಮ್ ವರ್ಗಾವಣೆಯಾದಾಗಿನಿಂದ ಕಣ್ಣೀರು ಹಾಕುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು. ಮಗುವಿನ ಹೆರಿಗೆಗಾಗಿ ರಾಯಚೂರಿಗೆ ಪೋಷಕರ ಮನೆಗೆ ಹೋದಾಗ ಪರಶುರಾಮ್ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯಿತು ಎಂದು ಪಿಎಸ್ಐ ಪರಶುರಾಮ ಅವರ ಪತ್ನಿ ಶ್ವೇತಾ ಹೇಳಿದ್ದಾರೆ.
ಘಟನೆಯ ನಂತರ ದಲಿತ ಸಂಘರ್ಷ ಸಮಿತಿ ಸದಸ್ಯರು ಪರಶುರಾಮ್ಗೆ ನ್ಯಾಯಕ್ಕಾಗಿ ಒತ್ತಾಯಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಶ್ವೇತಾ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಸಕರನ್ನು ಬೆಂಬಲಿಸುವ ಪೊಲೀಸರು ನನ್ನ ಪತಿಯನ್ನು ಬೆಂಬಲಿಸಲಿಲ್ಲ. ಹಣಕ್ಕಾಗಿ ಪೀಡಿಸಿದವರನ್ನು ಬೆಂಬಲಿಸುವ ಪೊಲೀಸರು ಶಾಸಕರನ್ನು ಬೆಳೆಸುತ್ತೀರಾ? ಶಾಸಕರಿಗಾಗಿ ನಿಮ್ಮ ತಂದೆ-ತಾಯಿ ಮತ್ತು ಕುಟುಂಬವನ್ನು ಕಡೆಗಣಿಸಿ ಹಗಲಿರುಳು ಶ್ರಮಿಸುತ್ತೀರಾ? ಅದಕ್ಕೆ ಈ ಶಾಸಕರೇ ಕಾರಣವಾಗಿದ್ದರೂ ಇಲ್ಲಿಯವರೆಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ವೇತಾ, ತನಗೆ ನ್ಯಾಯ ಬೇಕು ಎಫ್ ಐಆರ್ ದಾಖಲಿಸಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನೆಯಿಂದಾಗಿ ಸ್ವಲ್ಪ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.