


ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಪಿಕ್‌ಅಪ್ ವಾಹನವೊಂದು ರಸ್ತೆ ಬದಿಯ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯೊಳಗೆ ಮಲಗಿದ್ದ ಮಹಿಳೆ ಗಾಯಗೊಂಡ ಘಟನೆ ನಡೆದಿದೆ.
ವಿಟ್ಲ ಸಮೀಪದ ಪರಿಯಾಲತಡ್ಕ- ಸಾರಡ್ಕ ರಸ್ತೆಯ ಕೂರಲು ಎಂಬಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಕೂರಲು ಮದ್ಯದಂಗಡಿ ಬಳಿಯ ರಸ್ತೆಯ ಕೆಳಗಡೆ ಇರುವ ಮನೆ ಸಂಪೂರ್ಣ ಜಖಂಗೊಂಡಿದೆ.
ಮಹಿಳೆಯೊಬ್ಬರು ಮನೆಯೊಳಗೆ ಮಲಗಿದ್ದ ವೇಳೆ ಅವರ ಮೇಲೆ ಕೋಳಿ ಸಾಗಾಟದ ವಾಹನ ಬಿದ್ದಿದೆ. ವಾಹನದಲ್ಲಿದ್ದ ಕೋಳಿಗಳು ಸತ್ತಿವೆ ಎನ್ನಲಾಗಿದೆ. ಮಹಿಳೆ ಮನೆಯೊಳಗೆ ಸಿಲುಕಿಕೊಂಡಿದ್ದು, ಆಕೆಯನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಪಿಕಪ್ ವಾಹನದ ಚಾಲಕನಿಗೂ ಗಾಯಗಳಾಗಿದೆ.
ವಿಟ್ಲ ಪೊಲೀಸರು, ತುರ್ತು ಸೇವಾ ವಾಹನಗಳು, ಫ್ರೆಂಡ್ಸ್ ವಿಟ್ಲ ತಂಡ ಮತ್ತು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ಗಾಯಗೊಂಡ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಮನೆಯೊಳಗೆ ಸಿಲುಕಿದ್ದ ಮಂಜುನಾಥ, ಪತ್ನಿ ಶೋಭಾ ಮತ್ತು ಪುತ್ರ ಪುನೀತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕ್ರೇನ್ ಕೂಡ ಕರೆಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.








