Thursday, August 6, 2026
spot_imgspot_img
spot_imgspot_img

ಪುತ್ತೂರು: 45 ವರ್ಷಗಳ ಬಳಿಕ ವ್ಯಕ್ತಿಯನ್ನು ಕುಟುಂಬಕ್ಕೆ ಸೇರಿಸಿದ ಸಾಮಾಜಿಕ ಜಾಲತಾಣ

- Advertisement -
- Advertisement -

ಪುತ್ತೂರು: ತನ್ನ 21ನೇ ವಯಸ್ಸಿನಲ್ಲಿ ಉದ್ಯೋಗ ಅರಸಿಕೊಂಡು ಹೋಗಿ ನಾಪತ್ತೆಯಾಗಿದ್ದ ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ದೇರ್ಲ ಹೊಸಮನೆ ನಿವಾಸಿ ರಾಮಚಂದ್ರ ರೈ (66 ವರ್ಷ) ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ವಿಡಿಯೊದಿಂದಾಗಿ  45 ವರ್ಷಗಳ ಬಳಿಕ ಮತ್ತೆ ಕುಟುಂಬದವರನ್ನು ಸೇರಿಕೊಂಡಿದ್ದಾರೆ.

ದೇರ್ಲ ಹೊಸಮನೆಯ ರಾಮಣ್ಣ ರೈ–ಬೊಳಿಕ್ಕಲ ಪರಮೇಶ್ವರಿ ದಂಪತಿಯ ನಾಲ್ವರು ಪುತ್ರರು ಹಾಗೂ ಐವರು ಪುತ್ರಿಯರಲ್ಲಿ ರಾಮಚಂದ್ರ ಒಬ್ಬರು. ಊರು ಬಿಟ್ಟು ಹೋಗಿದ್ದ ಅವರು ಎಲ್ಲಿಗೆ ಹೋಗಿದ್ದಾರೆ, ಏನಾಗಿದ್ದಾರೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ಮನೆಮಂದಿ ಅವರಿಗಾಗಿ ಹುಡುಕಾಡಿದ್ದರೂ ಪ್ರಯೋಜನವಾಗಿರಲಿಲ್ಲ.  ತಿಪಟೂರು ಬಸ್ ನಿಲ್ದಾಣದ ಬಳಿ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದ ರಾಮಚಂದ್ರ ಅವರನ್ನು ಸ್ಥಳೀಯರು ಬೆಂಗಳೂರು ಆಸರೆ ವೃದ್ಧಾಶ್ರಮಕ್ಕೆ ದಾಖಲಿಸಿದ್ದರು. ರಾಮಚಂದ್ರ ಅವರು ತಾನು ಪುತ್ತೂರಿನ ಕೆಯ್ಯೂರು ಗ್ರಾಮದ ಮಾಡಾವು, ಬೊಳಿಕ್ಕಲದ ದೇರ್ಲದವನು ಎಂದು ವಿಡಿಯೊವೊಂದರಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.  ಆ ಮಾಹಿತಿಯನ್ನು ಆಧರಿಸಿ ಅವರ ಸಹೋದರ, ನೌಕಾ ಪಡೆಯ ನಿವೃತ್ತ ಅಧಿಕಾರಿ ದಿವಾಕರ ರೈ 10 ದಿನಗಳ ಹಿಂದೆ ತಿಪಟೂರಿನ ಆಶ್ರಮಕ್ಕೆ ತೆರಳಿ ವಿಚಾರಿಸಿದ್ದರು. ಅಲ್ಲಿದ್ದುದು ತನ್ನ ಸಹೋದರ ಎಂಬುದನ್ನು ಖಚಿತ ಪಡಿಸಿಕೊಂಡಿದ್ದರು.

ಬಳಿಕ ಮನೆಗೆ ಬಂದು  ಕುಟುಂಬದವರೊಂದಿಗೆ  ಚರ್ಚಿಸಿ ಅವರನ್ನು ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದ್ದರು.ಆಶ್ರಮದಲ್ಲಿರುವ ರಾಮಚಂದ್ರ ಅವರು ತನ್ನ ಸಹೋದರ ಎಂಬುವುದನ್ನು ಸಾಬೀತುಪಡಿಸಲು ಬೇಕಾದ ಪೂರಕ ದಾಖಲೆ ಪತ್ರಗಳೊಂದಿಗೆ ತಿಪಟೂರಿಗೆ ತೆರಳಿದ್ದ ದಿವಾಕರ ರೈ, ಅಲ್ಲಿನ ಆಸರೆ ವೃದ್ಧಾಶ್ರಮದ ಮುಖ್ಯಸ್ಥರಿಗೆ ಅವುಗಳನ್ನು ಒದಗಿಸಿದ್ದರು. ಅವರನ್ನು ಅಲ್ಲಿಂದ ಬುಧವಾರ ಮನೆಗೆ ಕರೆದುಕೊಂಡು ಬಂದಿದ್ದಾರೆ. ರಾಮಚಂದ್ರ ರೈ ಅವರು ಅವಿವಾಹಿತರಾಗಿ ಉಳಿದುಕೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

- Advertisement -

Related news

error: Content is protected !!