


ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ತೋಡಿನ ಬಳಿ ರಸ್ತೆ ನಿರ್ಮಿಸುವ ವಿಚಾರವು ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಮಹಾಲಿಂಗೇಶ್ವರ ಸಭಾಭವನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ವತಿಯಿಂದ ನಡೆದ ಸಭೆಯಲ್ಲೂ ಇದರ ಪ್ರತಿಫಲನ ಕಂಡುಬಂತು.
ಸಭೆಯಲ್ಲಿ ಭಾಗವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಸದಸ್ಯರು, ಬಿಜೆಪಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ, ಈ ರಸ್ತೆಯ ಫಲಾನುಭವಿಗಳಲ್ಲಿ ಒಂದಾದ ಸುಮಾರು 25 ಮನೆಗಳನ್ನು ಹೊಂದಿರುವ ಕಂಬಳಕೋಡಿ ನಿವಾಸಿಗಳು ರಸ್ತೆ ನಿರ್ಮಾಣದ ಪರವಾಗಿ ವಾದ ಮಂಡಿಸಿದರು.
ಭಕ್ತರ ಬೇಡಿಕೆಗಳು ಮತ್ತು ಅಭಿಪ್ರಾಯಗಳು ಮನದಟ್ಟಾಗುವ ರೀತಿಯಲ್ಲಿ ಚರ್ಚೆ ನಡೆಯಬೇಕು. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣವಾಗಬಾರದು. ರಸ್ತೆ ವಿಚಾರ ಸಂಘರ್ಷಕ್ಕೆ ಕಾರಣವಾಗದೆ, ಸೌಹಾರ್ದಯುತವಾಗಿ ಮುಕ್ತಾಯಗೊಳ್ಳಬೇಕು ಎಂದು ವೈದ್ಯ ಡಾ. ಸುರೇಶ್ ಪುತ್ತೂರಾಯ ಹೇಳಿದರು.
ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, “ಗೊಂದಲಮಯ ವಾತಾವರಣದಲ್ಲಿ ನಾವಿದ್ದೇವೆ. ದೇವಸ್ಥಾನ ಮಾಧ್ಯಮಗಳಿಗೆ ಆಹಾರವಾಗುವುದು ತಪ್ಪು. ರಸ್ತೆ ನಿರ್ಮಾಣವಾದರೆ ನಮ್ಮದೇ ಜನರಿಗೆ ಹೋಗಲು ಅಡ್ಡಿಯಿಲ್ಲ. ನಟರಾಜ ವೇದಿಕೆಯ ತೆರವು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಅಯ್ಯಪ್ಪ ಗುಡಿ ನಿರ್ಮಿಸುವ ಜಾಗದಲ್ಲಿ ತ್ಯಾಜ್ಯ ಬೀಳುತ್ತಿದೆ. ಆಡಳಿತ ಮಂಡಳಿಯು ಹಿಂದೂ ಸಮಾಜದ ನಂಬಿಕೆ ಹಾಗೂ ಭಾವನೆಗಳಿಗೆ ಗೌರವ ನೀಡಬೇಕು. ಭಕ್ತರ ಸಭೆ ಕರೆದು ಒಳಿತು ಕೆಡುಕುಗಳ ಕುರಿತು ಚರ್ಚೆ ನಡೆಸಬೇಕು. ಇಲ್ಲದಿದ್ದರೆ ಹೋರಾಟ. ಅನಿವಾರ್ಯವಾಗಲಿದೆ” ಎಂದರು.
“ನಾವು ಭಕ್ತರಾಗಿ ಸೇರಿದ್ದೇವೆಯೇ ಹೊರತು ಪದವಿಗಾಗಿ ಸೇರಿಲ್ಲ. ನಮ್ಮದೇ ಸಮಾಜದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಅಡ್ಡಿಯಿಲ್ಲ. ಆದರೆ ಎಲ್ಲ ಕೆಲಸಗಳು ಪಾರದರ್ಶಕವಾಗಿ ನಡೆದಿವೆಯೇ ಎಂಬ ಪ್ರಶ್ನೆ ಇದೆ. ಹಿಂದೂ ಸಮಾಜದ ನಂಬಿಕೆ ಮತ್ತು ಭಾವನೆಗಳಿಗೆ ಬೆಲೆ ನೀಡಬೇಕು” ಎಂದು ಅವರು ತಿಳಿಸಿದರು.
ಈಗಿನ ಆಡಳಿತ ಮಂಡಳಿಯಿಂದ ಅನ್ಯರ ವಶದಲ್ಲಿದ್ದ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಮರಳಿ ದೇವಸ್ಥಾನದ ಸುಪರ್ದಿಗೆ ಸೇರಿಸಿರುವುದು ಒಳ್ಳೆಯ ಕೆಲಸ. ಆದರೆ, ಈಗ ಭಕ್ತರ ಅಪೇಕ್ಷೆಗೆ ವಿರುದ್ಧವಾಗಿ ರಸ್ತೆ ನಿರ್ಮಿಸಲು ಮುಂದಾಗಿರುವುದು ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ. ಎಸ್‌ಪಿಟಿ ತೋಡಿನ ಎರಡೂ ಬದಿಯಲ್ಲಿ ಕಾಂಕ್ರೀಟ್ ಗೋಡೆ ನಿರ್ಮಿಸಿ, ಅದರ ಮೇಲೆ ಕಾಂಕ್ರೀಟ್ ಹಾಕಿ ರಸ್ತೆ ನಿರ್ಮಿಸಿದರೆ ಕಂಬಳಕೋಡಿ ನಿವಾಸಿಗಳಿಗೂ ರಸ್ತೆ ಸಿಗುತ್ತದೆ ಹಾಗೂ ದೇವಸ್ಥಾನದ ಜಾಗವೂ ಉಳಿಯುತ್ತದೆ. ರಸ್ತೆಯನ್ನು ಮಾಸ್ಟರ್ ಪ್ಲಾನ್ ಪ್ರದರ್ಶನದ ವೇಳೆ ವಿರೋಧಿಸಬೇಕಿತ್ತು ಎನ್ನುವುದು ಸರಿಯಲ್ಲ. ಈಗಲೂ ಮಾಸ್ಟರ್ ಪ್ಲಾನ್ ಬದಲಾಯಿಸಬಹುದು. ಇದನ್ನು ಸ್ವಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾದರೆ ಒಂದಿಂಚು ಜಾಗವನ್ನೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಪುತ್ತಿಲ ಹೇಳಿದರು.
ವಕೀಲ ಚಿನ್ಮಯ ರೈ ಹಾಗೂ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮಣಿಕಂಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಿಲ್ ಕುಮಾರ್ ಸ್ವಾಗತಿಸಿದರು. ಹರಿಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು. ಬಾಲಚಂದ್ರ ಸೊರಕೆ ವಂದಿಸಿದರು.
“ದೇವಸ್ಥಾನದ ಜಾಗದಲ್ಲಿ ಜೀವ ಹೋದರೂ ರಸ್ತೆ ನಿರ್ಮಿಸಲು ಬಿಡುವುದಿಲ್ಲ” ಎಂದು ದಿನೇಶ್ ಜೈನ್
ಹೇಳಿದರು.
“ಏಕಪಕ್ಷೀಯ ನಿರ್ಧಾರಗಳನ್ನು ಪುತ್ತೂರಿನ ಮಣ್ಣಿನಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಉದ್ಯಮಿ ಉಜ್ವಲ್ ಪ್ರಭು ಅಭಿಪ್ರಾಯಪಟ್ಟರು.
ದಿವಾಕರ ಮಡಿವಾಳ ಮಾತನಾಡಿ, “ನನ್ನ ಅಜ್ಜನ ಕಾಲದಲ್ಲಿ ರಥಬೀದಿ ರಸ್ತೆಗೆ ನಾವು ಮೂರು ಎಕರೆ ಜಾಗ ಬಿಟ್ಟುಕೊಟ್ಟಿದ್ದೇವೆ. ಅವರು ಜಾಗ ಕೊಡದಿದ್ದರೆ ಇಂದು ರಥಬೀದಿ ಇರುತ್ತಿರಲಿಲ್ಲ. ಆದರೆ ಈಗ ನಮಗೆ ಮನೆಗೆ ಹೋಗಲು ದಾರಿಯೇ ಇಲ್ಲದಂತಾಗಿದೆ. ಉದ್ದೇಶಿತ ರಸ್ತೆಯನ್ನು ನಿರ್ಮಿಸಲು ಬಿಡುವುದಿಲ್ಲ ಎಂದಾದರೆ, ನಮಗೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ವೇದಾವತಿ ಮಾತನಾಡಿ, “ನನ್ನ ಪುತ್ರಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ರಸ್ತೆಯಿಲ್ಲದೆ ಅನುಭವಿಸಿದ ಕಷ್ಟ ಮತ್ತಾರಿಗೂ ಬರಬಾರದು. ಮಳೆಗಾಲದಲ್ಲಿ ನಮ್ಮ ಮನೆಗಳಿಗೆ ನೀರು ನುಗ್ಗುತ್ತದೆ. ಸರಿಯಾದ ರಸ್ತೆ ಸಂಪರ್ಕವಿಲ್ಲದೆ ನಮ್ಮ ಮನೆಗಳಿಗೆ ನೆಂಟರು ಬರಲೂ ಹಿಂದೇಟು ಹಾಕುತ್ತಾರೆ” ಎಂದರು.
“ಮಳೆಗಾಲದಲ್ಲಿ ಪ್ರತಿ ವರ್ಷ ನಮ್ಮ ಮನೆಗಳಿಗೆ ನೀರು ಬರುತ್ತಿದೆ. ಕಳೆದ 30 ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ನಡುವೆ ಹಲವಾರು ಆಡಳಿತ ಮಂಡಳಿಗಳು ಹಾಗೂ ಶಾಸಕರು ಬಂದರು, ಹೋದರು. ಆದರೆ ಯಾರೂ ಅನುದಾನ ತರಲಿಲ್ಲ. ಇದೇ ಮೊದಲ ಬಾರಿಗೆ ಇಲ್ಲಿನ ಶಾಸಕರು ₹3 ಕೋಟಿ ಅನುದಾನ ತಂದಿದ್ದಾರೆ. ಈಗ ನಮ್ಮ ಕನಸು ನನಸಾಗುವ ಸಮಯದಲ್ಲಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ರಸ್ತೆ ನಿರ್ಮಾಣವಾಗದಿದ್ದರೆ 25 ಮನೆಗಳ ನೋವಿಗೆ ಎಲ್ಲರೂ ಕಾರಣರಾಗುತ್ತೀರಿ” ಎಂದು ಕಂಬಳಕೋಡಿ ನಿವಾಸಿಗಳು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಾಲಚಂದ್ರ ಸೊರಕೆ, “ದೇವಸ್ಥಾನದ ಜಾಗದಿಂದ ಒಂದಿಂಚು ಜಾಗವೂ ರಸ್ತೆಗೆ ಹೋಗಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಕಂಬಳಕೋಡಿ ನಿವಾಸಿಗಳು ಮಾತನಾಡಿದ ಬಳಿಕ ಮತ್ತೊಬ್ಬ ನಿವಾಸಿ ವೇದಾವತಿ ಮಾತನಾಡಲು ಮುಂದಾದಾಗ ಸಭೆಯ ಆಯೋಜಕರಿಂದ ವಿರೋಧ ವ್ಯಕ್ತವಾಯಿತು. “ಈಗಾಗಲೇ ಒಬ್ಬರು ಈ ವಿಷಯವಾಗಿ ಮಾತನಾಡಿದ್ದಾರೆ. ಅಷ್ಟೇ ಸಾಕು” ಎಂದು ಹೇಳಲಾಯಿತು. ಆದರೆ, ವೇದಾವತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು.
ವೇದಿಕೆಯಲ್ಲಿದ್ದ ಡಾ. ಸುರೇಶ್ ಪುತ್ತೂರಾಯ ಹಾಗೂ ಮುರಳೀಕೃಷ್ಣ ಹಸಂತಡ್ಕ ತಮ್ಮ ಭಾಷಣ ಮುಗಿಸಿ ತುರ್ತು ಕಾರ್ಯದ ನಿಮಿತ್ತ ಸಭೆಯಿಂದ ನಿರ್ಗಮಿಸಿದರು. ಇದೇ ರೀತಿ ಕಂಬಳಕೋಡಿ ನಿವಾಸಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಸಭೆಯಿಂದ ಹೊರಡಲು ಮುಂದಾದಾಗ, ಆಯೋಜಕರ ಪೈಕಿ ಕೆಲವರು ಸಭೆ ಮುಗಿಯುವವರೆಗೆ ಉಳಿಯುವಂತೆ ಆಕ್ಷೇಪಿಸಿದರು. ಈ ವೇಳೆ ಉಭಯಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಆಗ ಮಧ್ಯಪ್ರವೇಶಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಮುಖಂಡರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಕಂಬಳಕೋಡಿ ನಿವಾಸಿಗಳು ಸಭೆಯಿಂದ ಹೊರನಡೆದರು.








