


ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯ 2023-24ರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ದಿನಾಂಕ 31-05-2023 ರಂದು, ಪೂರ್ವಹ್ನ 10.00 ಘಂಟೆಗೆ ಮಾಯಿ ದೆ ದೇವುಸ್ ಚರ್ಚ್ ಸಭಾ ಭವನದಲ್ಲಿ ಜರಗಿತು. ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿನಿಯರನ್ನು ವಿಜ್ರಂಭಣೆಯಿಂದ ಶಾಲಾ ವಾದ್ಯಗೋಷ್ಠಿಯ ನಾದದೊಂದಿಗೆ ಶಾಲಾ ಸಭಾಭವನಕ್ಕೆ ಕರೆತರಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಶಾಲಾ ಸಂಚಾಲಕರಾದ ಫಾ| ಲಾರೆನ್ಸ್ ಮಸ್ಕರೇನ್ಹಸ್, ಚರ್ಚ್ ಪಾಲನಾ ಸಮಿತಿಯ ಉಪಾಧಕ್ಷ ಜೆರಾಲ್ಡ್ ಡಿಕೋಸ್ಟ, ಹೆಣ್ಮಕ್ಕಳ ಸುರಕ್ಷಾ ಸಮಿತಿಯ ಸಂಯೋಜಕಿ ಉದಯ ಕುಮಾರಿ, ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ, ಎಂಟನೇ ಹಾಗೂ ಒಂಭತ್ತನೇ ತರಗತಿಯ ಪ್ರತಿನಿಧಿಗಳಾದ ಕುಮಾರಿ ಅನ್ಸಿಟಾ ಡಿಸೋಜ, ಕುಮಾರಿ ಎ ಜಿ ಕೃತಿಕಾ, ಕುಮಾರಿ ಶಿಕಾ ರಮ್ಲತ್, ಕುಮಾರಿ ಸೌಂದರ್ಯ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾ| ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ “ವಿದ್ಯಾರ್ಥಿನಿಯರು ಪ್ರಾರ್ಥನೆ, ವಿಧೇಯತೆ, ಶಿಸ್ತು, ಹಾಗೂ ಕಲಿಕೆಗೆ ಆದ್ಯತೆ ನೀಡುವುದು. ಪ್ರತಿಯೊಂದು ವಿದ್ಯಾರ್ಥಿಯಲ್ಲಿ ವಿಭಿನ್ನ ಶಕ್ತಿ, ಪ್ರತಿಭೆ ಹಾಗೂ ಕೌಶಲ್ಯಗಳು ಇರುತ್ತದೆ. ಅವುಗಳನ್ನು ಸೂಕ್ತವಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ಕಲಿತರೆ ಅದೇ ನೀವು ನಿಮ್ಮ ಹೆತ್ತವರಿಗೆ ಹಾಗೂ ಹಿರಿಯರಿಗೆ ನೀಡುವ ಗೌರವ, ಮಕ್ಕಳಿಗೆ ಆಸಕ್ತಿ ಇದ್ದಾಗ ಮಾತ್ರ ಬೆಳವಣಿಗೆ ಸಾಧ್ಯ. ಭಗವಂತನ ಬೆಳಕು ಆಯುರಾರೋಗ್ಯ, ಕೃಪೆ ಹಾಗೂ ಉತ್ತಮ ಚಿಂತೆನೆಗೆ ಬೇಕಾದ ಮಾರ್ಗದರ್ಶನ ನಿಮಗೆ ಲಭಿಸಲಿ ಎಂದರು.
ಪ್ರಾರ್ಥನಾ ವಿಧಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಫಾಟಿಸಲಾಯಿತು. ಶಾಲಾ ಸಂಚಾಲಕರು ವಿದ್ಯಾರ್ಥಿನಿಯರಿಗೆ ಸಾಂಕೇತಿಕವಾಗಿ ಪಠ್ಯಪುಸ್ತಕವನ್ನು ವಿತರಿಸಿದರು. ಮುಖ್ಯ ಶಿಕ್ಷಕಿ ರೋಸ್‌ಲಿನ್ ಲೋಬೊರವರು ಸರ್ವರನ್ನು ಸ್ವಾಗತಿಸಿ, ಶಿಕ್ಷಕಿ ಸ್ಮಿತಾ ವಂದಿಸಿದರು. ಶಿಕ್ಷಕಿ ರೀನಾ ತೆರೆಜ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.