Thursday, May 16, 2024
spot_imgspot_img
spot_imgspot_img

ಪುತ್ತೂರು: ವಿಜಯ ಸಾಮ್ರಾಟ್ ಆಶ್ರಯದಲ್ಲಿ ‘ಪುತ್ತೂರುದ ಪಿಲಿಗೊಬ್ಬು-2023’ – ಪುಡ್‌ಫೆಸ್ಟ್‌ ಉದ್ಘಾಟನೆ

- Advertisement -G L Acharya panikkar
- Advertisement -

ಪುತ್ತೂರು: ಸಮಾಜಮುಖಿ ಚಿಂತನೆಯ ವಿಜಯ ಸಾಮ್ರಾಟ್ ಪುತ್ತೂರು ಸಂಸ್ಥೆಯ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಅ.22ರಂದು ನಡೆಯಲಿರುವ ಹುಲಿ ವೇಷಧಾರಿಗಳ ಕುಣಿತ ಸ್ಪರ್ಧೆ ‘ಪುತ್ತೂರುದ ಪಿಲಿಗೊಬ್ಬು-2023’ ಇದರ ಅಂಗವಾಗಿ ಎರಡು ದಿನಗಳ ಕಾಲ ನಡೆಯಲಿರುವ ವಿಶೇಷವಾಗಿ ತುಳುನಾಡಿನ ಖಾದ್ಯಗಳ ಜೊತೆಗೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ನಾನಾ ಬಗೆಯ ಖಾದ್ಯಗಳ ಮಳಿಗೆ ‘ಫುಡ್‌ಫೆಸ್ಟ್’ ಅ.21ರಂದು ಉದ್ಘಾಟನೆಗೊಂಡಿತು.

ಆಹಾರ ಮೇಳದ ಫುಡ್‌ಫೆಸ್ಟ್‌ ಅನ್ನು ಶಂಕರ್ ಗ್ರೂಪ್ ಆಪ್ ಕಂಪನಿಯ ಆಡಳಿತ ನಿರ್ದೇಶಕ ಸತ್ಯಶಂಕರ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪರಿವರ್ತಣೆಯೇ ವ್ಯಾಪಾರದ ಅಭಿವೃದ್ಧಿಯ ಯಶಸ್ಸು. ಹೊಸ ವಿಷಯದ ಬದಲಾವಣೆ ಕಂಡುಕೊಂಡಾಗ ಯಾವುದೇ ಉದ್ಯಮವೂ ಯಶಸ್ವಿಯಾಗಲಿದೆ. ಸಹಜ್ ರೈ ನೇತೃತ್ವದಲ್ಲಿ ಪ್ರಾರಂಭಿಸಲಾದ ಹುಲಿವೇಷ ಕುಣಿತ ಮುಂದೆ ಜಾತ್ರೆ, ಕಂಬಳದಷ್ಟೇ ಪ್ರಾಮುಖ್ಯತೆ ಪಡೆಯಲಿದೆ ಎಂದರು. ವ್ಯವಹಾರದಲ್ಲಿ ಹೊಸ ಉತ್ಪನ್ನವನ್ನು ಪ್ರಾರಂಭಿಸಿದ ಕೂಡಲೇ ಯಶಸ್ವಿಯಾಗಲು ಸಾಧ್ಯವಿಲ್ಲ. ಕಾಯುವ ತಾಳ್ಮೆಯಿರಬೇಕು. ಜೊತೆಗೆ ಸುಚಿತ್ವ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಹೊಸ ಉತ್ಪನ್ನ ಯಶಸ್ವಿಯಾದಾಗ ಮಾರುಕಟ್ಟೆಯಲ್ಲಿ ಸ್ಪರ್ಧೆಯಿರುವುದಿಲ್ಲ. ಉತ್ತಮ ದರವೂ ದೊರೆಯಲಿದೆ. ಬ್ಯಾಂಡ್ ಆಗಿ ಅಭಿವೃದ್ಧಿಯಾಗಲಿದೆ. ಹೀಗಾಗಿ ಹೊಸದಾಗಿ ಯೋಚಿಸಿ ಉದ್ಯಮ ಪ್ರಾರಂಭಿಸಬೇಕು. ಹುಲಿ ಕುಣಿತ ಮೂಲಕ ಫುಡ್ ಫೆಸ್ಟ್ ಆಯೋಜಿಸುವ ಮೂಲಕ ಆಹಾರ ಉದ್ಯಮದ ಬೆಳವಣಿಗೆಗೆ ಬಹಳ ಪ್ರೋತ್ಸಾಹ ಕಾರ್ಯಕ್ರಮವಾಗಿ ಮೂಡಿಬಬರಲಿದೆ ಎಂದರು.

ಪುತ್ತೂರು ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ ಮಾತನಾಡಿ, ಕೇವಲ ಹರಕೆಗೋಸ್ಕರ ಪ್ರಾರಂಭಗೊಂಡು ಹುಲಿ ವೇಷ ಕುಣಿತಕ್ಕೆ ಇಂದು ಉತ್ತಮ ವೇದಿಕೆ ದೊರೆತು ಮನ್ನಣೆ ಪಡೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಹುಲಿ ವೇಷ ಕುಣಿತದ ಜೊತೆಗೆ ಆಹಾರ ಮೇಳದ ಮೂಲಕ ಜನರ ಕಣ್ಣು, ಮನಸ್ಸು ಹಾಗೂ ಹೊಟ್ಟೆಯನ್ನು ತನಿಸಲಿದೆ. ವಿಭಿನ್ನ ಬಗೆಯ ಆಹಾರ ಮಳಿಗೆಗಳ ಮೂಲಕ ಸುಂದರ ಸೌಲಭ್ಯ ಕಲ್ಪಿಸಲಾಗಿದೆ. ಜಾತ್ರೋತ್ಸವ, ಕಂಬಳದಷ್ಟೇ ಹುಲಿ ಕುಣಿತ ಸ್ಪರ್ಧೆ ಆಹಾರ ಮೇಳದಲ್ಲಿಯೂ ಪ್ರಸಿದ್ಧಿಯನ್ನು ಪಡೆಯಲಿದೆ ಎಂದರು.

ರಂಗೋಲಿ ಹೋಟೇಲ್ ಮಾಲಕ ಚಂದ್ರಹಾಸ ಶೆಟ್ಟಿ ಮಾತನಾಡಿ, ಇಡ್ಲಿ ದೋಸೆಯಂತಹ ಅಕ್ಕಿಯ ಆಹಾರ ಉತ್ಪನ್ನಗಳನ್ನು ಜಗತ್ತಿಗೆ ಪರಿಚಯಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯವರು. ಜಿಲ್ಲೆಯ ಆಹಾರ ಉತ್ಪನ್ನಗಳನ್ನು ಜಗತ್ತಿನ ಯಾವ ಮೂಲೆಯಲ್ಲಿ ಪಡೆಯಲು ಸಾಧ್ಯವಿಲ್ಲ. ಜಗತ್ತಿನ ಮೂಲೆ ಮೂಲೆಯಲ್ಲಿ ಅಕ್ಕಿಯ ದೋಸೆ, ಇಡ್ಲಿಗಳನ್ನು ಪಡೆಯಬಹುದು. ಇಲ್ಲಿಯ ತಿಂಡಿ ತಿನಿಸುಗಳನ್ನು ಬೇರೆಲ್ಲಿಯೂ ಕಾಣಸಿಗುವುದಿಲ್ಲ. ಇಲ್ಲಿಯ ಆಹಾರ ಪದಾರ್ಥಗಳಲ್ಲಿ ಸಾಕಷ್ಟು ವೈಶಿಷ್ಟಯತೆಯಿದೆ. ಒಂದೊಂದು ಕಾರ್ಯಕ್ರಮಗಳಲ್ಲಿ ವಿಭಿನ್ನ ಬಗೆಯ ತಿನಿಸುಗಳನ್ನು ಕಾಣಬಹುದು ಎಂದ ಅವರು ಹುಲಿ ಕುಣಿತ ಮೂಲಕ ಬಹುದೊಡ್ಡ ಕಾರ್ಯಕ್ರಮ ಪುತ್ತೂರಿನಲ್ಲಿ ಆಯೋಜನೆ ಮಾಡುವ ಮೂಲಕ ಸಂತೋಷಕರ ವಾತಾವರಣ ಸೃಷ್ಠಿಸಿರುವದಕ್ಕೆ ಸಹಜ್ ರೈ ನೇತೃತ್ವದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ವಿಜಯ ಸಾಮ್ರಾಟ್‌ನ ಸ್ಥಾಪಕಾಧ್ಯಕ್ಷರು, ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ರೈ ಬಳೆಜ್ಜ, ಉಪಾಧ್ಯಕ್ಷರಾದ ಸಂದೀಪ್ ರೈ ನಂಜೆ, ದೇವಿಪ್ರಕಾಶ್ ಭಂಡಾರಿ, ಕಾರ್ಯದರ್ಶಿಗಳಾದ ಶರತ್ ಕುಮಾರ್ ಮಾಡಾವು, ಸುರೇಶ್ ಪಿದಪಟ್ಲ, ಶಂಕರ್ ಭಟ್ ಈಶಾನ್ಯ, ಕೋಶಾಧಿಕಾರಿಗಳಾದ ಅಶೋಕ್ ಅಡೂರು, ರಾಜೇಶ್ ಕೆ. ಗೌಡ, ಸಂಘಟನಾ ಕಾರ್ಯದರ್ಶಿ ಉದಯ ಪಾಟಾಳಿ ಬೆಳ್ಳಾರೆ, ಅರುಣ್ ರೈ ಉಪಸ್ಥಿತರಿದ್ದರು.

ದೀಕ್ಷಾ ಹಾಗೂ ಯಕ್ಷಿತಾ ಪ್ರಾರ್ಥಿಸಿದರು. ಪಿಲಿಗೊಬ್ಬು ಸಮಿತಿ ಉಮೇಶ್ ನಾಯಕ್ ಸ್ವಾಗತಿಸಿದರು. ಸಮಿತಿಯ ಪದಾಧಿಕಾರಿಗಳಾದ ದೇವಿಪ್ರಸಾದ್ ರೈ, ಸುಜಿತ್ ರೈ, ನಾಗರಾಜ ನಡುವಡ್ಕ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ನವ್ಯ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು ವಂದಿಸಿದರು.

ಹುಲಿ ವೇಷ ಕುಣಿತ ನೋಡುವುದರ ಜೊತೆಗೆ ತುಳುನಾಡಿನ ರುಚಿಕರ ಖಾದ್ಯಗಳು ಮಾತ್ರವಲ್ಲದೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದದ ನಾನಾ ಮಾದರಿಯ ಆಹಾರ ಪದಾರ್ಥಗಳನ್ನು ಒಂದೇ ಕಡೆ ಸವಿಯುವ ಸುವರ್ಣಾವಕಾಶವನ್ನು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದು ಪಗೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಗಳನ್ನು ಹೊಂದಿದೆ. ಸಂಪೂರ್ಣ ಸಸ್ಯಹಾರಿ ಆಹಾರ ಮಳಿಗೆಗಳಾಗಿದ್ದು ಬರ್ಗರ್, ಸ್ಯಾಂಡ್‌ವಿಚ್, ವಿವಿಧ ಬಗೆಯ ದೋಸೆಗಳು, ನಾನಾ ಬಗೆಯ ಐಸ್ಕ್ರೀಂಗಳು, ನಾನಾ ರೀತಿಯ ಬಿರಿಯಾನಿಗಳು, ಜ್ಯೂಸ್‌ಗಳು ಸೇರಿದಂತೆ ಬಾಯಲ್ಲಿ ನೀರುರಿಸುವ 40 ಅಧಿಕ ವಿವಿಧ ಖಾದ್ಯಗಳ ಮಳಿಗೆಗಳು ಫುಡ್‌ಫೆಸ್ಟ್‌ನಲ್ಲಿ ಜನರನ್ನು ಆಕರ್ಷಿಸುತ್ತಿದೆ

- Advertisement -

Related news

error: Content is protected !!