ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಸಂದೇಶ ಕಳುಹಿಸಿದ ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಎಫ್ ಐ ಆರ್ ದಾಖಲಿಸಲು ಪೊಲೀಸರಿಗೆ ಆದೇಶ ನೀಡಬೇಕೆಂದು ನೀಡಿದ ಖಾಸಗಿ ದೂರನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ಡಾ.ಸುರೇಶ್ ಪುತ್ತೂರಾಯರವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಪುರುಷರಕಟ್ಟೆಯ ಪಿ.ಬಿ.ಕೆ. ಮೊಹಮ್ಮದ್ ಎಂಬವರು ವಕೀಲ ಅಬ್ದುಲ್ ಮಜೀದ್ ಖಾನ್‌ರವರ ಮೂಲಕ ಸಲ್ಲಿಸಿದ್ದ ಖಾಸಗಿ ದೂರನ್ನು ಪುತ್ತೂರು ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್‌ರವರು ವಜಾಗೊಳಿಸಿ ಜುಲೈ 3ರಂದು ಆದೇಶ ನೀಡಿದ್ದಾರೆ.
ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗ್ರೂಪ್‌ನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯರವರು `ಪ್ರೀತಿಯ ಕೊರೋನಾ, ಹೇಗಿದ್ದರೂ ಭಾರತಕ್ಕೆ ಬಂದು ಬಿಟ್ಟಿದ್ದೀಯಾ, ಮೋದಿ ವಿರೋಧಿಗಳನ್ನು ಒಂದು ಸಲ ಭೇಟಿ ಮಾಡಿ ಹೋಗು, ಇಲ್ಲದಿದ್ದರೆ ಅವರೆಲ್ಲರೂ ಸಾಕ್ಷಿ ಕೇಳುತ್ತಾರೆ’ ಎಂದು ಸಂದೇಶ ಫಾರ್ವರ್ಡ್ ಮಾಡಿದ್ದಾರೆ, ಈ ಮೂಲಕ ಕೋಮು ಪ್ರಚೋದನೆ ಮಾಡಿದ್ದಾರೆ ಅಲ್ಲದೆ, ಪರಸ್ಪರ ಪಂಗಡಗಳನ್ನು ಎತ್ತಿ ಕಟ್ಟುವ ಹುನ್ನಾರ ನಡೆಸಿದ್ದಾರೆ, ಆದ್ದರಿಂದ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ 153-ಎ, 153-ಬಿ, 295, 295(ಎ), 505(1)ಸಿ ಮತ್ತು 66 ಎ ಮತ್ತು 67 ಇನ್ಫರ್‍ಮೇಷನ್ ಟೆಕ್ನಾಲಜಿ ಆಕ್ಟ್‌ನಡಿ ಕೇಸು ದಾಖಲಿಸಿಕೊಳ್ಳುವಂತೆ ನರಿಮೊಗ್ರು ಗ್ರಾಮದ ಪುರುಷರಕಟ್ಟೆಯ ಬಿ. ಇಬ್ರಾಹಿಂ ಎಂಬವರ ಪುತ್ರ ಪಿ.ಬಿ.ಕೆ. ಮೊಹಮ್ಮದ್ ಎಂಬವರು ವಕೀಲ ಅಬ್ದುಲ್ ಮಜೀದ್ ಖಾನ್‌ರವರ ಮೂಲಕ ಪುತ್ತೂರು ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಲಯಕ್ಕೆ ಜೂನ್ 29ರಂದು ಖಾಸಗಿ ದೂರು ಸಲ್ಲಿಸಿದ್ದರು.