Monday, June 22, 2026
spot_imgspot_img
spot_imgspot_img

ಕತಾರ್ ನ ನೈಸರ್ಗಿಕ ಅನಿಲ ಕೇಂದ್ರದಲ್ಲಿ ಭಾರೀ ಸ್ಫೋಟ – 54 ಮಂದಿಗೆ ಗಾಯ, 18 ಮಂದಿ ನಾಪತ್ತೆ

- Advertisement -
- Advertisement -

ದೋಹಾ: ಕತಾರ್‌ನ ಪ್ರಮುಖ ನೈಸರ್ಗಿಕ ಅನಿಲ ರಫ್ತು ಕೇಂದ್ರವಾದ ರಾಸ್ ಲಾಫನ್ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭಾರೀ ಸ್ಫೋಟದಿಂದ ಕನಿಷ್ಠ 54 ಮಂದಿ ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್ ಯುದ್ಧದ ಸಂದರ್ಭದಲ್ಲಿ ನಡೆಸಿದ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಅನಿಲ ರಫ್ತು ಕಾರ್ಯಾಚರಣೆಯನ್ನು ಪುನರಾರಂಭಿಸಲು ಕಾರ್ಮಿಕರು ಪ್ರಯತ್ನಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಫೋಟದ ಪರಿಣಾಮವಾಗಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಯುದ್ಧಕ್ಕೆ ಶಾಶ್ವತ ಅಂತ್ಯ ಕಾಣಿಸುವ ಕುರಿತು ಮಾತುಕತೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾನ್ ತನ್ನ ನಿಯಂತ್ರಣವನ್ನು ಸಡಿಲಗೊಳಿಸಿದ ನಂತರ, ಕತಾರ್ ಮತ್ತೆ ರಫ್ತು ಟರ್ಮಿನಲ್ ಕಾರ್ಯಾರಂಭಿಸಲು ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆ ಭಾನುವಾರ ರಾತ್ರಿ ರಫ್ತು ಕಾರ್ಯಾಚರಣೆಗಳನ್ನು ಮರುಪ್ರಾರಂಭಿಸುವ ವೇಳೆ ಬರ್ಝಾನ್ ಅನಿಲ ಪೂರೈಕೆ ಘಟಕದಲ್ಲಿ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡಿದೆ ಎಂದು ಸರ್ಕಾರಿ ಸ್ವಾಮ್ಯದ ಕತಾರ್ ಎನರ್ಜಿ ಸಂಸ್ಥೆ ಮಾಹಿತಿ ನೀಡಿದೆ.

ಸ್ಫೋಟದಿಂದ ಉಂಟಾದ ಹಾನಿಯ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಆರಂಭದಲ್ಲಿ ಕೆಲವೇ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಕೆಲವೇ ಗಂಟೆಗಳ ಬಳಿಕ ಕತಾರ್ ಆಂತರಿಕ ಸಚಿವಾಲಯ ಗಾಯಾಳುಗಳ ಸಂಖ್ಯೆ 54ಕ್ಕೆ ಏರಿರುವುದಾಗಿ ಹಾಗೂ 18 ಮಂದಿ ನಾಪತ್ತೆಯಾಗಿರುವುದಾಗಿ ಪ್ರಕಟಿಸಿದೆ.

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಸ್ಫೋಟದ ನಿಖರ ಕಾರಣ ಹಾಗೂ ಹಾನಿಯ ಪ್ರಮಾಣ ಕುರಿತು ತನಿಖೆ ನಡೆಯುತ್ತಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!