ಮಂಗಳೂರು:-ದ.ಕ. ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಮರ, ವಿದ್ಯುತ್ ಕಂಬ ಬಿದ್ದು, ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹಾನಿಯಾಗುವುದು ಸೇರಿದಂತೆ ಮನೆಯೊಳಗೆ ಒಂದಿಂಚು ನೀರು ಬಂದರೂ ತಕ್ಷಣ 10,000 ರೂ.ಗಳನ್ನು ನೀಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ದ.ಕ. ಜಿಲ್ಲೆಯ ಮಳೆ ಹಾನಿ ಪರಿಹಾರ, ಪ್ರವಾಹದ ಕುರಿತಂತೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆಯನ್ನು ನೀಡಿದರಲ್ಲದೆ, ಇದನ್ನು ಸರಕಾರದ ನಿರ್ದೇಶನವನ್ನಾಗಿ ಪಾಲಿಸುವಂತೆ ತಿಳಿಸಿದರು. ಪ್ರವಾಹದಿಂದ ಸಂತ್ರಸ್ತರಾದವರಿಗೆ ಆಶ್ರಯ ನೀಡಲಾಗುವ ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವ ಅಶೋಕ್, ಈ ಕುರಿತಂತೆ ಅಧಿಕಾರಿಗಳು ಜಿಪುಣತನ ತೋರಿಸಬಾರದು ಎಂದು ಸಲಹೆ ನೀಡಿದರು.

ಕಾಳಜಿ ಕೇಂದ್ರಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಒಂದೇ ರೀತಿಯ ಆಹಾರವನ್ನು ನೀಡಬಾರದು. ಅದನ್ನು ನಿರಂತರವಾಗಿ ಬದಲಿಸುತ್ತಿರಬೇಕು. ಪೌಷ್ಟಿಕವಾದ ಆಹಾರವನ್ನು ಒದಗಿಸಬೇಕು. ಪರಿಹಾರ ಕಾರ್ಯಗಳಿಗೆ ಹಣಕ್ಕೆ ತೊಂದರೆ ಇಲ್ಲ. ಪ್ರವಾಹ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲೆಗೆ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಜನರ ಕಷ್ಟದ ಸಂದರ್ಭ ಸರಕಾರ ಜತೆಗಿದೆ ಎನ್ನುವ ರೀತಿಯಲ್ಲಿ ಎಚ್ಚರಿಕೆ ವಹಿಸಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.


ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಪ್ರತಾಪ್ ಸಿಂಹ ನಾಯಕ್ ತಮ್ಮ ಕ್ಷೇತ್ರಗಳಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿ ತುರ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಡಿಸಿಪಿ ಅರುಣಾಂಶಗಿರಿ, ಎಡಿಸಿ ರೂಪಾ ಉಪಸ್ಥಿತರಿದ್ದರು.
