




ರಾಯಚೂರು: ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಘಟನೆ ನಡೆದಿದೆ.
ಹೈದ್ರಾಬಾದ್ ಮೂಲದ ಯುವನ ಚಂದ್ರ , ಸತೀಶ್(35), ಮಂತ್ರಾಲಯ ಗ್ರಾಮದ ರಾಘವೇಂದ್ರ (25), ಧನುಷ್ (23), ಉರವಕೊಂಡದ ಸಂಧ್ಯಾ (22)ನೀರುಪಾಲಾದವರು. ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದ ಸಂಬಂಧಿಕರು ದುರ್ಮರಣಕ್ಕೀಡಾಗಿದ್ದಾರೆ.
ಪೂಜೆಯ ಬಳಿಕ ನದಿಯಲ್ಲಿ ಈಜಲು ತೆರಳಿದ್ದ ವೇಳೆ ದುರ್ಘಟನೆ ನಡೆದಿದ್ದು, ನದಿಯಲ್ಲಿ ನೀರಿನ ಆಳ ತಿಳಿಯದೇ ಈಜಲು ತೆರಳಿ ನೀರುಪಾಲಾಗಿದ್ದಾರೆ. ಘಟನೆಯಲ್ಲಿ ಯುವತಿ ಅಪರ್ಣಾ ಪಾರಾಗಿದ್ದಾಳೆ. ಸ್ಥಳದಲ್ಲಿ ಪೊಲೀಸರು, ಮೀನುಗಾರರಿಂದ ಹುಡುಕಾಟ ನಡೆದಿದ್ದು ಧನುಷ್ ಮೃತ ದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ನದಿಯಲ್ಲಿ ನೀರುಪಾಲಾದವರ ಹುಡುಕಾಟ ವೇಳೆ ಅಪರಿಚಿತ ವ್ಯಕ್ತಿಯ ಶವವೂ ಪತ್ತೆಯಾಗಿದ್ದು ಮಂತ್ರಾಲಯಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.








