ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಸಿಎಂ ಅಶೋಕ್ ಗೆಹ್ಲೋಟ್ ಗೆ ಶಾಸಕರ ಬೆಂಬಲವಿಲ್ಲ ಎಂದು ಹೇಳುತ್ತಿದ್ದ ಡಿಸಿಎಂ ಸಚಿನ್ ಪೈಲಟ್ ಗೆ 102 ಶಾಸಕರು ಟಕ್ಕರ್ ಕೊಟ್ಟಿದ್ದಾರೆ.ಇಂದು ಸಿಎಂ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ನಡೆದಿರುವ ಸಭೆಯಲ್ಲಿ ಕಾಂಗ್ರೆಸ್ನ 102 ಶಾಸಕರು ಪಾಲ್ಗೊಳ್ಳುವ ಮೂಲಕ ತಮ್ಮ ಸರ್ಕಾರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಶಾಸಕರ ಪೈಕಿ ಸಚಿನ್ ಪೈಲಟ್ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದ ಶಾಸಕರೂ ಇರುವುದರಿಂದ ಸಚಿನ್ ಪೈಲಟ್ ಬೆಂಬಲಿಗ ಶಾಸಕರ ಸಂಖ್ಯೆ ಕಡಿಮೆಯಾದಂತಾಗಿದೆ.
ನನ್ನ ರೀತಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ 30 ಶಾಸಕರು ನನಗೆ ಬೆಂಬಲ ಕೊಟ್ಟಿದ್ದಾರೆ ಎಂದು ಸಚಿನ್ ಪೈಲಟ್ ಹೇಳಿದ್ದರು. ಆದರೆ, ಆ 30 ಶಾಸಕರ ಪೈಕಿ ಕೆಲವರು ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನೆಯಲ್ಲಿ ನಡೆದಿರುವ ಸಿಎಲ್ಪಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ, ಸಚಿನ್ ಪೈಲಟ್ ಬಣದ ಸಂಖ್ಯೆ ಕಡಿಮೆಯಾಗಿದೆ.
ಗೆಹ್ಲೋಟ್ ಸರ್ಕಾರಕ್ಕಿರುವ 107 ಕಾಂಗ್ರೆಸ್ ಶಾಸಕರ ಬೆಂಬಲದಲ್ಲಿ ಇಂದು 102 ಶಾಸಕರು ಸಿಎಲ್ಪಿ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಬಂಡಾಯ ಶಾಸಕರ ಬಣದಲ್ಲಿ ಸಚಿನ್ ಪೈಲಟ್ ಸೇರಿ ಕೇವಲ ಐವರು ಕೈ ಶಾಸಕರು ಉಳಿದುಕೊಂಡಂತಾಗಿದೆ. ಇನ್ನು ಸಭೆ ಬಳಿಕ ಎಲ್ಲ ಶಾಸಕರನ್ನು ಜೈಪುರ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ.