


ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 42ನೇ ವಾರ್ಷಿಕ ಭಾರತ ದಿನದ ಪರೇಡ್ ಆಗಸ್ಟ್ 18ರಂದು ಅಮೆರಿಕದ ಮ್ಯಾನ್‌ಹಟನ್‌ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಮೆರವಣಿಗೆಯಲ್ಲಿ ಜನರು ವಿಶೇಷ ಟ್ಯಾಬ್ಲೋವನ್ನು ನೋಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಗುತ್ತದೆ. ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜ, ದೇಶಭಕ್ತಿ ಮತ್ತು ಜನಪ್ರಿಯ ಭಾರತೀಯ ಹಾಡುಗಳನ್ನು ಪ್ರದರ್ಶಿಸಲಾಗುತ್ತದೆ. ಅಯೋಧ್ಯೆ ರಾಮಮಂದಿರದ ಟ್ಯಾಬ್ಲೊವನ್ನು ಪ್ರದರ್ಶಿಸಲಾಗುತ್ತದೆ. ನ್ಯೂಯಾರ್ಕ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನಡೆದ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಎನ್ ವೈ. ಎನ್ ಜೆ, ಸಿಟಿ, ಎನ್ ಇ (ಎಫ್ ಐಎ) ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಈ ವಿಷಯ ಘೋಷಿಸಲಾಗಿದೆ.
ಖ್ಯಾತ ಭಾರತೀಯ ನಟ ಪಂಕಜ್ ತ್ರಿಪಾಠಿ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೆರವಣಿಗೆಯು ನ್ಯೂಯಾರ್ಕ್ ನಗರದ ಪ್ರಸಿದ್ದ ಮ್ಯಾಡಿಸನ್ ಅವೆನ್ಯೂ ಮೂಲಕ ಹಾದುಹೋಗುತ್ತದೆ. ಸಾವಿರಾರು ಭಾರತೀಯ ವಲಸಿಗರಿಗೆ ಇದನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.
ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಪ್ರತಿ ವರ್ಷ ಇಂಡಿಯಾ ಡೇ ಪರೇಡ್ ಅನ್ನು ಆಯೋಜಿಸುತ್ತದೆ. ಇದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಹೊರಗೆ ನಡೆದ ಅತಿ ದೊಡ್ಡ ಕಾರ್ಯಕ್ರಮ ಎಂದು ಪರಿಗಣಿಸಲಾಗಿದೆ. ಮೆರವಣಿಗೆಯು ವಿವಿಧ ಭಾರತೀಯ-ಅಮೇರಿಕನ್ ಸಮುದಾಯಗಳನ್ನು ಪ್ರತಿನಿಧಿಸುವ ಡಜನ್ ಗಟ್ಟಲೆ ಫ್ಲೋಟ್ ಗಳನ್ನು ಒಳಗೊಂಡಿರುತ್ತದೆ.
ಈ ಬಾರಿಯ ಪರೇಡ್ ನ ವಿಷಯ ವಸುಧೈವ ಕುಟುಂಬಕಂ ಆಗಿದೆ. ಈ ವರ್ಷ ಮೆರವಣಿಗೆಯು 18 ಅಡಿ ಉದ್ದ, ಒಂಬತ್ತು ಅಡಿ ಅಗಲ ಮತ್ತು ಎಂಟು ಅಡಿ ಎತ್ತರದ ರಾಮಮಂದಿರದ ಭವ್ಯವಾದ ಪ್ರತಿಕೃತಿಯನ್ನು ಒಳಗೊಂಡಿರುತ್ತದೆ. ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ರಾಮಮಂದಿರದ ಪ್ರತಿಕೃತಿಯನ್ನು ಪ್ರದರ್ಶಿಸಲಾಗುವುದು. ಈ ಹೆಜ್ಜೆ ಭಾರತೀಯ ಸಮುದಾಯಕ್ಕೆ ಐತಿಹಾಸಿಕ ಕ್ಷಣವಾಗಲಿದೆ.








