ಮಂಗಳೂರು: ರಾಜ್ಯ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ (ಅ.7ರಂದು) ದೇಶದ ಪ್ರಥಮ ಪ್ರಜೆ ರಾಮ್‌ನಾಥ್ ಕೋವಿಂದ್ ಕಡಲ ನಗರಿ ಮಂಗಳೂರಿನಲ್ಲಿ ವಾಸ ಮಾಡಲಿದ್ದು, ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರಾಷ್ಟ್ರಪತಿ ಅ.7ರಂದು ನಗರಕ್ಕೆ ಬಂದು ವಾಸ್ತವ್ಯ ಮಾಡುವರು. ಅ. 8ರ ಸಂಜೆ ಮಂಗಳೂರಿನಿಂದ ನವದೆಹಲಿಗೆ ತೆರಳುವರು. ಈ ಸಂದರ್ಭದಲ್ಲಿ ವಸತಿ, ಊಟೋಪಚಾರ ಹಾಗೂ ಬಂದೋಬಸ್ತ್ ಗೆ ಸಂಬಂಧಿಸಿದ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು. ರಾಷ್ಟ್ರಪತಿ ವಾಸ್ತವ್ಯ ಮಾಡುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಅತಿಥಿ ಗೃಹ ಸಂಪೂರ್ಣ ಸಿಂಗಾರಗೊಳ್ಳಬೇಕು. ಅಂತಿಮ ಹಂತದ ಸಿದ್ಧತೆ ಪರಿಪೂರ್ಣವಾಗಿರಬೇಕು. ಸ್ಪಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು.
ಮಹಾನಗರ ಪಾಲಿಕೆ ವತಿಯಿಂದ ಅತಿಥಿ ಗೃಹದ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ವಿಮಾನ ನಿಲ್ದಾಣದಿಂದ ಅತಿಥಿ ಗೃಹಕ್ಕೆ ಬರುವ ರಸ್ತೆಗಳಲ್ಲಿ ನ್ಯೂನತೆಗಳಿದ್ದಲ್ಲಿ ದುರಸ್ತಿಪಡಿಸಿಕೊಳ್ಳಬೇಕು ಎಂದು ಹೇಳಿದರು. ರಾಷ್ಟ್ರಪತಿಗಳ ಪ್ರವಾಸದಲ್ಲಿ ರಾಜ್ಯಪಾಲರು ಕೂಡ ಭಾಗವಹಿಸುತ್ತಿದ್ದಾರೆ. ಅವರ ವಾಸ್ತವ್ಯಕ್ಕೂ ಕಾಳಜಿ ನೀಡಬೇಕು ಸಂಬಂಧಿಸಿದ ಅಧಿಕಾರಿಗಳು ಜಾಗೃತರಾಗಿರಬೇಕು ಎಂದಿದ್ದಾರೆ.
ನಗರದಲ್ಲಿ ಬಿಗಿ ಬಂದೋಬಸ್ತ್ – ಶಶಿಕುಮಾರ್, ಪೊಲೀಸ್ ಆಯುಕ್ತರು
ರಾಷ್ಟ್ರಪತಿ ಪ್ರವಾಸ ಕಾರ್ಯಕ್ರಮದಲ್ಲಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಈ ವೇಳೆ ಅಧಿಕಾರಿಗಳು ಸೇರಿದಂತೆ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುವುದು. ರಾಷ್ಟ್ರಪತಿಗಳ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.
ಆರ್ಟಿಪಿಸಿಆರ್ ತಪಾಸಣೆ ಕಡ್ಡಾಯ
ರಾಷ್ಟ್ರಪತಿಗಳ ವಾಸ್ತವ್ಯದ ವೇಳೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಕಡ್ಡಾಯವಾಗಿ ಆರ್ ಟಿಪಿಸಿಆರ್ ತಪಾಸಣೆ ಆಗಬೇಕು. ಆದ್ಯತೆ ಮೇರೆಗೆ ಅವರ ವರದಿಗಳನ್ನು ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೂಚಿಸಿದರು. ಮೆಸ್ಕಾಂ ನಿಂದ ವಿದ್ಯುತ್ ಕಡಿತ ಆಗಬಾರದು. BSNLನಿಂದ ಹಾಟ್ ಲೈನ್ ಎಳೆಯುವುದನ್ನು ಕೂಡಲೇ ಪೂರ್ಣಗೊಳಿಸಬೇಕು. ಕರ್ತವ್ಯಕ್ಕೆ ನಿಯೋಜಿಸಿರುವ ಲೈಸನಿಂಗ್ ಅಧಿಕಾರಿಗಳು ಶಿಷ್ಟಾಚಾರದಂತೆ ವರ್ತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.