ಬೆಂಗಳೂರು: ಶೀಘ್ರದಲ್ಲೇ ದ.ಕ ಜಿಲ್ಲೆಗೆ 25 ಸಾವಿರ ರ‍್ಯಾಪಿಡ್ ಕಿಟ್ ಹಾಗೂ 15 ಆ್ಯಂಬುಲೆನ್ಸ್ ಗಳನ್ನು ಮಂಜೂರು ಮಾಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜತೆ ಡಿಸಿಎಂ ಅಶ್ವಥ್ ನಾರಾಯಣ್ ವಿಕಾಸಸೌಧದಲ್ಲಿ ತುರ್ತು ಸಭೆ ನಡೆಸಿದರು.
ಸಭೆ ಬಳಿಕ ದ.ಕ ಜಿಲ್ಲಾಧಿಕಾರಿ, ಹಾಗೂ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಯು.ಟಿ ಖಾದರ್ ಜತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಡಿಸಿಎಂ, ಕೋರೊನಾ ಸೋಂಕಿತರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿದ ನಂತರ ಅಗತ್ಯವಿದ್ದಲ್ಲಿ, ಕೂಡಲೇ ಖಾಸಗಿ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಲಾಗುವುದು. ಅಲ್ಲದೇ, ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇನ್ನು ಮುಂದೆ ಕೋವಿಡ್-19 ಚಿಕಿತ್ಸೆ ಒಳಪಡುವವರು ಹಾಗೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವವರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಭರವಸೆ ನೀಡಿದರು.
- ಶೀಘ್ರದಲ್ಲೇ ಸೋಂಕಿತರ ಸಮಸ್ಯೆ ಪರಿಹಾರ*
ಇನ್ನು ತುರ್ತು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ, ಕೊರೊನಾ ಸೋಂಕಿತರ ಸಮಸ್ಯೆ ಶೀಘ್ರದಲ್ಲಿ ಪರಿಹಾರವಾಗಲಿದೆ. ತಮ್ಮ ಜಿಲ್ಲೆಯ ನೆರವಿಗೆ ಬಂದ ಸಿಎಂ ಬಿಎಸ್ ವೈ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ಧನ್ಯವಾದ ಸಲ್ಲಿಸಿದ್ರು.