ಬೆಂಗಳೂರು(ಅ.25): ರ್ಯಾಶ್ ಡ್ರೈವಿಂಗ್, ವ್ಹೀಲಿಂಗ್ ಮಾಡಿದರೆ 2 ಲಕ್ಷ ರೂ ಬಾಂಡ್ ಬರೆಸಿಕೊಳ್ಳಲು ನಗರದ ಸಂಚಾರಿ ಪೊಲೀಸರು ಮುಂದಾಗಿದ್ದು, ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ಜೈಲು ಶಿಕ್ಷೆ ವಿಧಿಸಲೂ ಕ್ರಮ ಕೈಗೊಂಡಿದ್ದಾರೆ.

ಸಂಚಾರಿ ನಿಯಮ ಪಾಲನೆ ಮಾಡದೆ, ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದರೆ, ವ್ಹೀಲಿಂಗ್ ಮಾಡಿದರೆ ಎರಡು ಲಕ್ಷ ಬಾಂಡ್ ಬರೆದುಕೊಡಬೇಕು. ಅಷ್ಟೇ ಅಲ್ಲ, ಎಲ್ಲಾ ದಾಖಲೆಗಳನ್ನು ನೀಡಬೇಕು, ಪೋಷಕರೂ ಬಂದು ಮುಚ್ಚಳಿಕೆಯನ್ನೂ ಬರೆದುಕೊಡಬೇಕು.

ನಗರದಲ್ಲಿ ಈಗಾಗಲೇ 14 ಕೇಸ್ಗಳನ್ನು ದಾಖಲಿಸಲಾಗಿದೆ. ಕರ್ಕಶ ಶಬ್ದದ ಸೈಲೆನ್ಸರ್ ಬಳಸಿದರೂ ಐವತ್ತು ಸಾವಿರ ರೂ. ಬಾಂಡ್ ಬರೆದುಕೊಡಬೇಕು. ಮತ್ತೆ ನಿಯಮ ಉಲ್ಲಂಘಿಸಿದರೆ ಎರಡು ಲಕ್ಷ ರೂ ದಂಡ ಕಟ್ಟಿಕೊಡುವುದರ ಜತೆಗೆ ಜೈಲು ವಾಸವನ್ನೂ ಅನುಭವಿಸಬೇಕಾಗುತ್ತದೆ. ಆಯಾ ಠಾಣಾ ವ್ಯಾಪ್ತಿಯ ಲಾ ಅಂಡ್ ಆರ್ಡರ್ ಡಿಸಿಪಿ ಕ್ರಮ ಕೈಗೊಳ್ಳುತ್ತಾರೆ. ಭದ್ರತಾ ಬಾಂಡ್ ಕೇಸ್ ಆದ್ರೆ ವೀಸಾ ಪಾಸ್ ಪೋರ್ಟ್ ಮತ್ತು ಭವಿಷ್ಯಕ್ಕೆ ಪೆಟ್ಟು ಎಂದು ಸಂಚಾರಿ ವಿಭಾಗದ ಮುಖ್ಯಸ್ಥ ರವಿಕಾಂತೇಗೌಡ ಹೇಳಿದ್ದಾರೆ.18 ವರ್ಷದ ಒಳಗಿನ ಮಕ್ಕಳು ನಿಯಮ ಉಲ್ಲಂಘಿಸಿದರೆ ಪೋಷಕರ ಮೇಲೆ ಕೇಸ್ ಬೀಳಲಿದೆ. ಸಾರ್ವಜನಿಕರಿಗೆ ಆಗಬಹುದಾದ ಅನಾಹುತ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಕಾಲಂ 107 ನ್ನು ಪೊಲೀಸರು ಜಾರಿಗೊಳಿಸಿದ್ದಾರೆ.

